ಯಡಿಯೂರಪ್ಪ ಜೈಲಿಗೆ ಹೋಗಲು ಕುಮಾರಸ್ವಾಮಿ ಕಾರಣ: ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿ
ಉಮೇಶ ಗೌರಿ (ಯರಡಾಲ)

ಬೆಳಗಾವಿ:ಮಾಜಿ ಸಿಎಂ ಕುಮಾರಸ್ವಾಮಿಗೆ ಸ್ವಾಭಿಮಾನ ಇರಬೇಕಿತ್ತು. ಯಾರು ಇವರನ್ನು ಇಳಿಸಿದರೋ (ಸಿಎಂ ಸ್ಥಾನದಿಂದ) ಅವರ ಜೊತೆ ದೋಸ್ತಿ ಮಾಡಿದ್ದಾರೆ. ಬಿಜೆಪಿ ಜೊತೆಗೆ ಜೆಡಿಎಸ್‌ ಹೊಂದಾಣಿಕೆ ರಾಜಕಾರಣ ರಾಜ್ಯದ ಜನ ಒಪ್ಪುವುದಿಲ್ಲ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಅಥಣಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಗೆ ಸ್ವಾಭಿಮಾನ ಇರಬೇಕಿತ್ತು. ಯಡಿಯೂರಪ್ಪ ಜೈಲಿಗೆ ಹೋಗಲು ಕುಮಾರಸ್ವಾಮಿ ಕಾರಣ. ಅದೇ ಯಡಿಯೂರಪ್ಪ ಈಗ ಕುಮಾರಸ್ವಾಮಿಯನ್ನು ತಬ್ಬಿಕೊಂಡು ಪಕ್ಕಕ್ಕಿಟ್ಟುಕೊಂಡಿದ್ದಾರೆ. ಅಧಿಕಾರಕ್ಕಾಗಿ ಸ್ವಾಭಿಮಾನ ಮರೆಯುತ್ತಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ. ಸ್ವಾಭಿಮಾನ ಬೇಕಾಗುತ್ತದೆ. ಜೀವನದಲ್ಲಿ ಅಧಿಕಾರ ಬರುತ್ತದೆ. ಹೋಗುತ್ತದೆ. ಆದರೆ, ಸ್ವಾಭಿಮಾನ ಬಹಳ ಮುಖ್ಯ. ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ತತ್ವ, ಸಿದ್ಧಾಂತ ಬದಿಗೊತ್ತಿ ಅಧಿಕಾರದ ಲಾಲಸೆಗೆ ಬಿಜೆಪಿ- ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ ಎಂದು ಟೀಕಿಸಿದರು.

ಅಧಿಕಾರಕ್ಕೋಸ್ಕರ ಸ್ವಾಭಿಮಾನ ಬದಿಗೆ ಇಟ್ಟು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ವಚನ ಭ್ರಷ್ಟರು ಎಂದು ಆರೋಪ ಮಾಡಿ ದ್ವೇಷ ಸಾಧಿಸಲು ಯಡಿಯೂರಪ್ಪನವರು ಹೋಗಿದ್ದರು. ಅದೇ ಕುಮಾರಸ್ವಾಮಿ ಅವರು ಬಿಎಸ್ವೈ ಅವರನ್ನು ಭ್ರಷ್ಟಾಚಾರ ಸುಳಿಯಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದರು. ಆದರೆ ಇವತ್ತು ಅಧಿಕಾರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಆರು ತಿಂಗಳಲ್ಲಿ ಸರ್ಕಾರ ಪತನವಾಗುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆ ನೋಡಿದರೆ ಏನು ಹೇಳಬೇಕೋ ನನಗೂ ಮುಜುಗರವಾಗುತ್ತಿದೆ. ಯಾರು ಕುಮಾರಣ್ಣನ ಇಳಿಸಿದರೋ ಅವರ ಮನೆಯಲ್ಲಿ ಕುಳಿತು ಚರ್ಚೆ ಮಾಡುತ್ತಿದ್ದಾರೆ ಎಂದರೆ ಏನರ್ಥ? ಯಾರು ಸರ್ಕಾರ ಕಿತ್ತು ಹಾಕಿದರೋ ಅವರ ಪಕ್ಕದಲ್ಲೇ ಕುಳಿತು ಇಂತಹ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಚುನಾವಣೆ ಸಮೀಪ ಬಂದಾಗ ಜೆಡಿಎಸ್ ಬಿಜೆಪಿಯಲ್ಲಿ ವಿಲೀನ ಆದರೂ ಅಚ್ಚರಿ ಪಡಬೇಕಿಲ್ಲ. ವಿಪಕ್ಷ ನಾಯಕನ ಸ್ಥಾನ ಕುಮಾರಸ್ವಾಮಿ ಮನೆ ಬಾಗಿಲಿಗೆ ಬರುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ರಾಜ್ಯದಲ್ಲಿ ಬಿಜೆಪಿ ನಾಯಕನಿಲ್ಲದ ಪಕ್ಷ. ಲೀಡರ್‌ಲೆಸ್ ಪಾರ್ಟಿ ಆಗಿದೆ. ಲೀಡರ್‌ಲೆಸ್ ಪಾರ್ಟಿ ಇರುವುದರಿಂದ ಬಿಜೆಪಿ ರಾಷ್ಟ್ರೀಯ ನಾಯಕರು ಆಲೋಚನೆ ಮಾಡುತ್ತಿದ್ದಾರೆ. ಹೊರಗುತ್ತಿಗೆ ಮೇಲೆ ಯಾರನ್ನಾದರೂ ತೆಗೆದುಕೊಂಡು ನಾಯಕ ಮಾಡಬೇಕೆಂಬ ಚಿಂತನೆ ನಡೆದಿದೆ. ಅದಕ್ಕೆ ಈ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬರಬಹುದು ಎಂದು ಬಹಳ ದಿನದ ಹಿಂದೆಯೇ ಹೇಳಿದ್ದೆ. ಆಗ ಹೇಳಿದ ಭವಿಷ್ಯ ಈಗ ಸಮೀಪ ಬರುತ್ತಿದೆ ಎಂದರು.

ಚುನಾವಣೆ ಸಮೀಪ ಬಂದಾಗ ಜೆಡಿಎಸ್ ಬಿಜೆಪಿಯಲ್ಲಿ ವಿಲೀನ ಆದರೂ ಅಚ್ಚರಿ ಪಡಬೇಕಿಲ್ಲ. ಆದರೆ, ದೇವೇಗೌಡರ ಒಪ್ಪಿಗೆ ಇರದೇ ಇರುವುದರಿಂದ ಚುನಾವಣೆಗೆ ಮಾತ್ರ ಸೀಮಿತ ಎನ್ನುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್‌ ಬಿಜೆಪಿಯಲ್ಲಿ ವಿಲೀನವಾಗಬಹುದು. ಬಿಜೆಪಿ ರಾಷ್ಟ್ರೀಯ ನಾಯಕರು ಕುಮಾರಸ್ವಾಮಿಯನ್ನು ವಿಪಕ್ಷ ನಾಯಕನನ್ನಾಗಿ ಮಾಡಲು ಚಿಂತನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ:

ಬಿಜೆಪಿ- ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ಗೆ ಅತೀ ಹೆಚ್ಚು ಲಾಭವಾಗುತ್ತದೆ. ಅನೇಕ ಕಡೆ ಬಿಜೆಪಿ -ಜೆಡಿಎಸ್ ಎದುರಾಳಿಯಂತಹ ವಾತಾವರಣ ಇದೆ. ಅವರೇನು ಮಾಡಬೇಕು ಅಲ್ಲಿ ಇಬ್ಬರೇ ಹೊಡೆದಾಡಿರುವಂತದ್ದು. ರಾಯಚೂರು ಜಿಲ್ಲೆಯ ಅನೇಕ ಕ್ಷೇತ್ರಗಳಲ್ಲಿ ಆ ರೀತಿ ಪರಿಸ್ಥಿತಿ ಇದೆ. ಹಾಸನದಲ್ಲಿ ಪ್ರೀತಂಗೌಡ ಯಾವಾಗಲೂ ದೇವೇಗೌಡ ಜೆಡಿಎಸ್ ಜೊತೆ ಹೋರಾಟ ಮಾಡಿ ಬೆಳೆದಂತವರು. ಪಾಪ ಪ್ರೀತಂಗೌಡನದ್ದು ರಾಜಕೀಯ ಅಸ್ತಿತ್ವವೇ ಮುಳುಗಿ ಹೋಗುತ್ತದೆ. ತುಮಕೂರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಗೆ, ಜೆಡಿಎಸ್ ಮಾಜಿ ಶಾಸಕರು ಎದುರಾಳಿಗಳು. ಇಂತಹ ಅನೇಕ ಕ್ಷೇತ್ರಗಳಲ್ಲಿ ಸಮಸ್ಯೆ ಇದೆ ಎಂದು ಹೇಳಿದರು.

ನಾನು ಸಿಎಂ ಆಗಿದ್ದಾಗ ನನ್ನ ಮಗ ಕಾಂಪೌಂಡ್ ಹತ್ತಿರ ಬರುತ್ತಿರಲಿಲ್ಲ, ಯತೀಂದ್ರನೇ ವರುಣಾ ಶಾಸಕ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು 30 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿ ಇದ್ದೇನೆ. ಯಾವ್ಯಾವ ಮುಖ್ಯಮಂತ್ರಿಗಳ ಮಕ್ಕಳು ಏನೇನ್ ಮಾಡುತ್ತಿದ್ದರು., ಏನೇನ್ ನೋಡುತ್ತಿದ್ದರು. ಯಾವ್ಯಾವ ಜವಾಬ್ದಾರಿ ತೆಗೆದುಕೊಂಡಿದ್ದರು ಎಂಬುದನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅದರ ಬಗ್ಗೆ ಚರ್ಚೆ ಬೇಡ. ಮುಟ್ಟಾದ ಮೇಲೆ ಗರತಿ ಎಂದು ಹೇಳುತ್ತಾರಲ್ಲ, ಹಾಗಾಗುತ್ತೆ ಇದು ಎಂದರು.

ಅಮಿತ ಶಾ ನನಗೆ ಕರೆ ಮಾಡುವ ಸಂದರ್ಭ ಉದ್ಭವ ಆಗಿಲ್ಲ. ಯಾರೇ ಕರೆ ಮಾಡಿದರೂ ಆ ಮನೆ ಬಿಟ್ಟು ಬೇರೆ ಮನೆಗೆ ಬಂದು ಆನಂದವಾಗಿ ಇದ್ದೇನೆ. ಆ ಮನೆಯಿಂದ ಹೊರಗೆ ಹಾಕುವಾಗಲೇ ಅವರು ಆಲೋಚನೆ ಮಾಡಬೇಕಾಗಿತ್ತು. ಇನ್ನೊಂದು ಮನೆಯವರು ಬಂದು ಆಶ್ರಯ ಕೊಟ್ಟಿದ್ದು ಆರಾಮಾಗಿ ಇದ್ದೇನೆ. ಬಾ ಅಂದ್ರೆ ಹೇಗೆ ಹೋಗೋದಕ್ಕೆ ಆಗುತ್ತದೆ ಎಂದು ಪ್ರಶ್ನಿಸಿದರು.

ನೀವು ತೊರೆದ ಮನೆಗೆ ಕುಮಾರಸ್ವಾಮಿ ಕೈ ಜೋಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ಕುಮಾರಸ್ವಾಮಿಯವರೇ ಹುಷಾರಾಗಿ ಅಲ್ಲಿ ನಿಮ್ಮ ರಾಜಕೀಯ ಮಾಡುತ್ತ ಇರಬೇಕು. ಯಾವಾಗ ಏನೇನು ಮಾಡುತ್ತಾರೋ ಎನ್ನುವುದು 25 ವರ್ಷದಲ್ಲಿ ನನಗೆ ಅರ್ಥ ಆಗಿಲ್ಲ. ಕುಮಾರಣ್ಣ ಸ್ವಲ್ಪ ಹುಷಾರಾಗಿ ಆ ಪಕ್ಷದ ಜೊತೆ ಒಡನಾಟ ಇಟ್ಟುಕೊಳ್ಳಬೇಕು. ಯಾವಾಗ ಅಲ್ಲಿ ಬಾಂಬ್ ಹಾರುತ್ತದೆ ಯಾರಿಗೂ ಗೊತ್ತಾಗಲ್ಲ. ಹುಷಾರಾಗಿರಿ ಎಂದು ಎಚ್‌.ಡಿ.ಕುಮಾರಸ್ವಾಮಿಗೆ ಸಲಹೆ ನೀಡಿದರು.

ಬಿಜೆಪಿ ಜೆಡಿಎಸ್ ಮೈತ್ರಿಯನ್ನು ಹಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವತ್ತಿನ ಮೈತ್ರಿ ವಿಚಾರವನ್ನು ಖಂಡಿಸಿ ಜೆಡಿಎಸ್ ಪಕ್ಷದಲ್ಲಿ ಕೆಲವು ಮಾಜಿ ಶಾಸಕರು ಮತ್ತು ಹಾಲಿ ಶಾಸಕರು ಮತ್ತು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ಮುಂದಾಗಿದ್ದು, ಸದ್ಯ ಅವರು ಕವಲು ದಾರಿಯಲಿ ನಿಂತಿದ್ದಾರೆ. ಅವರನ್ನು ರಕ್ಷಿಸಿಕೊಳ್ಳಲು ಕುಮಾರಸ್ವಾಮಿಯವರು ಈ ಸರ್ಕಾರ ಪತನದ ಹೊಸ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇನ್ನೂ ಐದು ವರ್ಷ ಈ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಸವದಿ ಸ್ಪಷ್ಟಪಡಿಸಿದರು.

 

 

ಕೃಪೆ:ಸುವರ್ಣಾ.ಟಿವಿ

Share This Article
";