Saturday, July 20, 2024

ಮಿಸ್ಟರ್ ಡಿ.ಕೆ.ಶಿವಕುಮಾರ್. ನಿಮ್ಮ ಕಸನು ಈಡೇರುವುದಿಲ್ಲ: ಹೆಚ್.ಡಿ.ದೇವೇಗೌಡ

ರಾಮನಗರ.ಅ.2: ಜೆಡಿಎಸ್ ಪಕ್ಷವನ್ನು ಶೂನ್ಯ ಮಾಡಿಬಿಡುತ್ತೇನೆ. ಅಲ್ಲಿ ಒಬ್ಬ ಸಮರ್ಥ ನಾಯಕನನ್ನು ಇರಲು ಬಿಡಲ್ಲ ಎಂದು ಹೇಳಿದ್ದೀರಿ ಮಿಸ್ಟರ್ ಡಿ.ಕೆ.ಶಿವಕುಮಾರ್. ನಿಮ್ಮ ಕಸನು ಈಡೇರುವುದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಗುಡುಗಿದ್ದಾರೆ.

ಡಿಕೆ ಅವರೇ, ನಿಮ್ಮ ಕೆಟ್ಟ ರಾಜಕೀಯ ಆಟ ನನ್ನ ಬಳಿ ನಡೆಯಲ್ಲ. ಅದು ನಿಮಗೆ ಗೊತ್ತಿರಲಿ, ನಮ್ಮ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡದಿಯ ಕೇತಿಗಾನಹಳ್ಳಿಯ ಹೆಚ್.ಡಿ.ಕುಮಾರಸ್ವಾಮಿ ಅವರ ತೋಟದಲ್ಲಿ ನಿನ್ನೆ ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇವತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗಟ್ಟಿಯಾದ ಸಂದೇಶ ಕೊಟ್ಟಿದ್ದಾರೆ ಎಂದಿದ್ದಾರೆ.

ತಮ್ಮ ಮಾತಿನುದ್ಧಕ್ಕೂ ತಮ್ಮ ಪಕ್ಷವನ್ನು ದುರ್ಬಲಗೊಳಿಸಲು ಕುತಂತ್ರ ರೂಪಿಸಿರುವ ಡಿಕೆಶಿ ವಿರುದ್ಧ ಹರಿಹಾಯ್ದ ಗೌಡರು, ಆ ವ್ಯಕ್ತಿಗೆ ಉತ್ತರ ಕೊಡಬೇಕು, ಕೊಡುವ ಕೆಲಸ ಮಾಡುತ್ತೇವೆ. ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಹಾಗೆ ಭಾವಿಸಿದ್ದರೆ ಅದು ಅವರ ಭ್ರಮೆ ಅಷ್ಟೇ ಎಂದು ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.

ಈ ಸಭೆ ಬಹಳ ಚೆನ್ನಾಗಿ ನಡೆದಿದೆ. ಕುಮಾರಸ್ವಾಮಿ ಅವರಿಗೆ ಇವತ್ತು ಒಳ್ಳೆಯ ಸಂದೇಶ ನೀಡಿದ್ದಾರೆ. ಪಕ್ಷದ ಶಕ್ತಿ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಈ ಸಭೆಗೆ ಬಂದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಭಾವುಕರಾಗಿ ನುಡಿದಿದ್ದಾರೆ. ಬಹಳ ಆಕ್ರೋಶಭರಿತರಾಗಿ ಭಾಷಣ ಮಾಡಿದ ಅವರು, ಕಾರ್ಯಕರ್ತರನ್ನು ನಂಬಿದ್ದೇನೆ. ಪಕ್ಷದ ಬೆಳೆವಣಿಗೆಗೆ ಒಳ್ಳೆಯ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ರಾಜಕೀಯ ಬೆಳವಣಿಗೆ ಆಗುತ್ತಿದೆ. ಈ ಬಗ್ಗೆ ಕೇಂದ್ರ ಗೃಹಮಂತ್ರಿ ಅವರನ್ನು ಭೇಟಿ ಮಾಡಿದ್ದೆ. ಸುದೀರ್ಘ ಚರ್ಚೆ ನಡೆಸಿದ್ದೇನೆ. ಅವರ ಜತೆ ಮೈತ್ರಿ ಬಗ್ಗೆ ಚರ್ಚೆ ಮಾಡಿದೆ ಎಂದು ಹೇಳಿದ್ದಾರೆ.

ಈ ರಾಜಕಾರಣ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಆದರೆ, ನಾನೆಂದೂ ಅದನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ. ಆದರೆ ಕಾಂಗ್ರೆಸ್‍ನವರು ರಾಜಕೀಯವನ್ನು ಅದೆಷ್ಟು ಕನಿಷ್ಠ ಮಟ್ಟಕ್ಕೆ ಇಳಿಸಬೇಕೋ ಅಷ್ಟು ಮಾಡಿದ್ದಾರೆ. ಸಿದ್ದಾಂತ ಎನ್ನುವುದು ಆ ಪಕ್ಷದಲ್ಲಿ ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಮುಗಿದು ಹೋಯಿತು ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ರಾಜಕೀಯವಾಗಿ ನನ್ನ ಜತೆ ಇದ್ದ ಅನೇಕರು ಐಶ್ವರ್ಯ ಹುಡುಕಿಕೊಂಡು ಎಲ್ಲೆಲ್ಲೋ ಹೋದರು. ಬೇರೆ ಬೇರೆ ಪಕ್ಷಗಳಿಗೆ ಹೊರಟು ಹೋದರು. ನಾನು ಇಲ್ಲಿಯೇ ಇದ್ದೇನೆ. ನನಗೇನೂ ಬೇಸರ ಇಲ್ಲ. ಈ ಇಳಿ ವಯಸ್ಸಿನಲ್ಲಿಯೂ ಪಕ್ಷವನ್ನು ಕಟ್ಟುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ದೇಶ ಮುಂದೆ ಏನಾಗುತ್ತೋ ಊಹೆ ಮಾಡಲಾಗಲ್ಲ. ಪಕ್ಕದಲ್ಲಿ ಪಾಕಿಸ್ತಾನ, ಚೀನಾ ಇವೆ. ದೂರದಲ್ಲಿ ಅಮೆರಿಕ, ರಷ್ಯಾ ಇದೆ. ಈ ದೇಶವನ್ನು ಉಳಿಸುವ ನಾಯಕತ್ವ ಬೇಕು ಎಂದು ಹೇಳಿದ್ದಾರೆ.

ಜೀವ ಲೆಕ್ಕಿಸದೆ ಕಾಶ್ಮೀರಕ್ಕೆ ಹೋದೆ:
ದೆಹಲಿಯಲ್ಲಿ ಕಾಂಗ್ರೆಸ್‍ನವರು ಅನೇಕ ವರ್ಷ ಆಡಳಿತ ನಡೆಸಿದರು. ಒಮ್ಮೆಯೂ ಯಾವ ಪ್ರಧಾನಿಯೂ ಕಾಶ್ಮೀರದ ಕಡೆ ತಲೆ ಹಾಕಿ ಮಲಗಲಿಲ್ಲ. ಕೊನೆಗೆ ನಾನು ಹೋದೆ. ಅಧಿಕಾರಿಗಳು ಬೇಡವೇ ಬೇಡ ಎಂದಿದ್ದರು. ಭಯೋತ್ಪಾದಕರು ಹೊಡೆದು ಹಾಕುತ್ತಾರೆ ಎಂದರೂ ನಾನು ಜೀವ ಲೆಕ್ಕಿಸದೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದೆ. ದೇಶದ ಹಿತಾಸಕ್ತಿ ನನಗೆ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಎಷ್ಟು ಮಾಡಿದೆ. ನಾನು ಏನು ಮಾಡಿದೀನಿ ಎಂಬ ಬಗ್ಗೆ ಚರ್ಚೆ ನಡೆಯಲಿ. ಉತ್ತರ ಸಿಗುತ್ತದೆ ಎಂದು ಅವರು ಸವಾಲು ಹಾಕಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಬಗ್ಗೆ ನಾನು ಲಘುವಾಗಿ ಮಾತನಾಡಲಿಲ್ಲ ಎನ್ನುತ್ತಲೇ, ಭದ್ರಾವತಿ ದಿನಗಳನ್ನು ನೆನಪು ಮಾಡಿಕೊಂಡ ಗೌಡರು, ಒಂದು ಸನ್ಮಾನಕ್ಕೆಂದು ಅಲ್ಲಿಗೆ ಹೋದೆ, ಅಲ್ಲಿ ನನಗೆ ಸನ್ಮಾನದ ಜತೆ ಇಬ್ರಾಹಿಂ ಸಿಕ್ಕಿದರು ಕರೆದುಕೊಂಡು ಬಂದು ಯುವ ಜನತಾದಳ ಅಧ್ಯಕ್ಷರನ್ನಾಗಿ ಮಾಡಿದೆ ಎಂದು ತಿಳಿಸಿದರು.

 

 

ಕೃಪೆ:ಈಸಂಜೆ

ಜಿಲ್ಲೆ

ರಾಜ್ಯ

error: Content is protected !!