ಬೆಂಗಳೂರು(ಸೆ.16): ಯುವತಿಯ ಮೊಬೈಲ್‌ಗೆ ಖಾಸಗಿ ವಿಡಿಯೋ ಕಳುಹಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಖಾಸಗಿ ಹೋಟೆಲ್‌ನ ಪಾಲುದಾರರಾದ ಮಹಿಳೆ ಸೇರಿ ಇಬ್ಬರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿಯ ಕಿರಣ್ (28) ಮತ್ತು ನಯನಾ (44) ಬಂಧಿತರು. 22 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಮೂಲದ ಆರೋಪಿಗಳಾದ ಕಿರಣ್ ಮತ್ತು ನಯನಾ ಪಾಲುದಾರಿಕೆಯಲ್ಲಿ ಕೆಂಚನಪುರ ಕೆಂಗೇರಿ ಮುಖ್ಯರಸ್ತೆಯಲ್ಲಿ ಹೋಟೆಲ್‌ವೊಂದನ್ನು ನಡೆಸುತ್ತಿದ್ದಾರೆ. ನಗರದ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಯುವತಿ ಇತ್ತೀಚೆಗೆ ತನ್ನ ಸ್ನೇಹಿತ ಜತೆಗೆ ಈ ಹೋಟೆಲ್‌ಗೆ ತೆರಳಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಇದನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದ ಆರೋಪಿ ಕಿರಣ್, ಯುವತಿ ಮೊಬೈಲ್‌ಗೆ ಖಾಸಗಿ ಫೋಟೋ ಹಾಗೂ ವಿಡಿಯೊ ಕಳುಹಿಸಿ ಡಿಲೀಟ್ ಮಾಡಿದ್ದಾನೆ.
ನಂತರ ಯುವತಿಗೆ ಕರೆ ಮಾಡಿ, ನೀನು ನಿನ್ನ ಸ್ನೇಹಿತನ ಜತೆಗೆ ನಮ್ಮ ಹೋಟೆಲ್ ರೂಮ್‌ನಲ್ಲಿ ಕಳೆದಿರುವ ಖಾಸಗಿ ಕ್ಷಣದ ವಿಡಿಯೊ ಹಾಗೂ ಫೋಟೊಗಳು ಇವೆ. ನೀನು ನನಗೆ ಒಂದು ಲಕ್ಷ ರು. ಹಣ ಕೊಡಬೇಕು. ಇಲ್ಲವಾದರೆ, ಈ ಅಶ್ಲೀಲ ವಿಡಿಯೊ, ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ. ಹಾಗೆಯೇ ನಿನ್ನ ಸಂಬಂಧಿಕರು ಹಾಗೂ ಸ್ನೇಹಿತರಿಗೂ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಪದೇ ಪದೇ ಯುವತಿಗೆ ಕರೆ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಈತನ ಕಾಟದಿಂದ ಬೇಸತ್ತ ಯುವತಿ, ಅನ್ಯ ಮಾರ್ಗವಿಲ್ಲದೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆಗೆ ಹೋಟೆಲ್‌ಗೆ ಸಹ ಮಾಲಕಿ ನಯನಾ ಸಂಬಂಧಿಯಾಗಿದ್ದಾಳೆ. ಆಗಾಗ ಸಂತ್ರಸ್ತೆ ಹೋಟೆಲ್‌ಗೆ ಬರುತ್ತಿದ್ದರಿಂದ ಆರೋಪಿ ಕಿರಣ್ ಪರಿಚಯವಿತ್ತು. ಇತ್ತೀಚೆಗೆ ಸಂತ್ರಸ್ತೆ ತನ್ನ ಸ್ನೇಹಿತನ ಜತೆಗೆ ಹೋಟೆಲ್‌ಗೆ ಬಂದು ರೂಮ್ ಪಡೆದು ಖಾಸಗಿ ಕ್ಷಣ ಕಳೆದಿದ್ದಳು. ಈ ನಡುವೆ ಆರೋಪಿ ಕಿರಣ್ ರೂಮ್‌ನಲ್ಲಿ ರಹಸ್ಯ ಕ್ಯಾಮರಾ ಇರಿಸಿ ಖಾಸಗಿ ಕ್ಷಣ ಗಳನ್ನು ಸೆರೆ ಹಿಡಿದಿದ್ದ. ಈ ವಿಚಾರ ನಯನಾಗೂ ಗೊತ್ತಿತ್ತು. ಬಳಿಕ ಆರೋಪಿ ಕಿರಣ್ ಆ ವಿಡಿಯೊ ಬಳಸಿಕೊಂಡು ಸಂತ್ರಸ್ತೆಯಿಂದ ಹಣ ಸುಲಿಗೆ ಮಾಡಲು ಪ್ಲ್ಯಾನ್ ಮಾಡಿದ್ದ.