Saturday, July 20, 2024

ಕಿತ್ತೂರಿನಲ್ಲಿ ನ.7ರಂದು ಅದ್ಧೂರಿ ವಿನಯೋತ್ಸವ: ‘ಕೈ ಶಕ್ತಿ ಪ್ರದರ್ಶನ’ದ ಉಸ್ತುವಾರಿ ಹೊತ್ತ ಬಾಬಾಸಾಹೇಬ್ ಪಾಟೀಲ್

ಚನ್ನಮ್ಮನ ಕಿತ್ತೂರು: ತಂತ್ರ, ಹೋರಾಟ, ಬಲಿದಾನದ ಐತಿಹಾಸಿಕ ಕಿತ್ತೂರು ನೆಲದಲ್ಲಿ ‘ಕೈ’ ಪಡೆ ಇದೀಗ ಶಕ್ತಿ ಪ್ರದರ್ಶನದ ಕಹಳೆ ಊದುವುದಕ್ಕೆ ಸನ್ನದ್ಧವಾಗಿದೆ!

ಇದೇ ನವೆಂಬರ್ 7 ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರ 54ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಚನ್ನಮ್ಮನ ಕಿತ್ತೂರು ಮತ ಕ್ಷೇತ್ರದಲ್ಲಿ ಅದ್ಧೂರಿ ‘ವಿನಯೋತ್ಸವ’ ಆಚರಣೆಗೆ ಭರದ ಸಿದ್ಧತೆ ಶುರುವಾಗಿದೆ. ಕಾರಣಾಂತರಗಳಿಂದ ತವರು ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಾಗದೇ ಇರುವುದಕ್ಕಾಗಿ ಮಾಜಿ ಸಚಿವ ಕುಲಕರ್ಣಿ ಕಿತ್ತೂರಿನ ಹೊರ ವಲಯದಲ್ಲಿರುವ ಸುಮಾರು 50 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಸಂಖ್ಯ ಅಭಿಮಾನಿಗಳು, ಕೈ ಕಾರ್ಯಕರ್ತರು, ಮುಖಂಡರು, ಸಿನಿ ದುನಿಯಾದವರು ಕಾಂಗ್ರೆಸ್ ನಾಯಕ ವಿನಯ ಕುಲಕರ್ಣಿ ಅವರ ಬರ್ಥ್ ಡೆ ಸೆಲಬ್ರೇಷನ್‌ಗೆ ಸಾಕ್ಷಿಯಾಗಲಿದ್ದಾರೆ.

ಇದು ಬರೀ ಬರ್ಥ್ ಡೆ ಸೆಲಬ್ರೆಷನ್ ಆಗಿದ್ದಿದ್ದರೆ ಇಷ್ಟೊಂದು ಕುತೂಹಲ ಕೆರಳಿಸುತ್ತಿರಲಿಲ್ಲ. ಆದರೆ ಇನ್ನೇನು 2023ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲಯಲ್ಲಿ ಹುಟ್ಟು ಹಬ್ಬದಾಚರಣೆಯ ಆಚೆಗೂ ಈ ಅದ್ಧೂರಿ ಕಾರ್ಯಕ್ರಮ ಪಕ್ಷದ ಶಕ್ತಿ ಪ್ರದರ್ಶನವಾಗಿ ಮಾರ್ಪಾಡಾಗಲಿದೆ ಅನ್ನುವುದಕ್ಕೇ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಅದೂ ಅಲ್ಲದೇ ಕಿತ್ತೂರು ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಚುನಾವಣೆ ಎಂದರೆ ಯಾವಾಗಲೂ ಮುಂಚೂಣಿಯಲ್ಲಿರುವ ಕೈ ಮುಖಂಡ ಬಾಬಾ ಸಾಹೇಬ್ ಪಾಟೀಲ ಅವರು ಈ ‘ವಿನಯೋತ್ಸವ’ ಕಾರ್ಯಕ್ರಮದ ಒಟ್ಟು ಹೊಣೆಯನ್ನು ತಮ್ಮ ಹೆಗಲ ಮೇಲೆಯೇ ಹೊತ್ತುಕೊಂಡಿದ್ದು, ಕ್ಷೇತ್ರದಲ್ಲಿ ಮತ್ತಷ್ಟೂ ಸಂಚಲನ ಮೂಡಿಸಿದೆ.

ನವೆಂಬರ್ 7 ರಂದು ಬರೋಬ್ಬರಿ 50 ಎಕರೆ ಪ್ರದೇಶದ ಭವ್ಯ ವೇದಿಕೆಯಲ್ಲಿ ನಡೆಯಲಿರುವ ‘ವಿನಯೋತ್ಸವ’ಕ್ಕೆ ಬಹುತೇಕ 2 ಲಕ್ಷಕ್ಕೂ ಅಧಿಕ ಮಂದಿಯನ್ನು ಸೇರಿಸುವ ಜವಾಬ್ದಾರಿ ಹೊತ್ತಿರುವ ಬಾಬಾಸಾಹೇಬ್ ಪಾಟೀಲ ಅವರು ಈಗಾಗಲೇ ಪಕ್ಷದ ಕಾರ್ಯಕರ್ತರನ್ನು ಸಕ್ರಿಯಗೊಳಿಸಿದ್ದಾರೆ. ಚನ್ನಮ್ಮನ ಕಿತ್ತೂರು ಕ್ಷೇತ್ರದ ಇತಿಹಾಸದಲ್ಲಿಯೇ ಇಷ್ಟೊಂದು ಅದ್ಧೂರಿ ಹುಟ್ಟು ಹಬ್ಬದಾಚರಣೆ ಆಗಿರುವ ಪುರಾವೆಯೇ ಇಲ್ಲ. ಹೀಗಾಗಿ ಹುಟ್ಟು ಹಬ್ಬದಾಚರಣೆ ಹಾಗೂ ಶಕ್ತಿ ಪ್ರದರ್ಶನದ ಮೂಲಕ ಇತಿಹಾಸವನ್ನೇ ನಿರ್ಮಿಸಿಬಿಡುವ ಉತ್ಸಾಹದಲ್ಲಿ ಪಕ್ಷದ ಮುಖಂಡ ಬಾಬಾಸಾಹೇಬ್ ತೊಡಗಿದ್ದಾರೆ.

ಕಳೆದ ಸೆ.2ರಂದು ಕಿತ್ತೂರು ಹಾಲಿ ಶಾಸಕ ಮಹಾಂತೇಶ ದೊಡಗೌಡರ ಹುಟ್ಟು ಹಬ್ಬ ಹಾಗೂ  ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಡೆದ ಕೈ ಕಾರ್ಯಕರ್ತರ ಬೈಕ್ ರ‍್ಯಾಲಿ ಕ್ಷೇತ್ರದ ಎಂ.ಕೆ.ಹುಬ್ಬಳ್ಳಿಯಲ್ಲಿಯೇ ನಡೆದಿದ್ದವು. ಬ್ಯಾಕ್ ಟು ಬ್ಯಾಕ್ ಎರಡೂ ಕಾರ್ಯಕ್ರಮಗಳು ಎಂ.ಕೆ.ಹುಬ್ಬಳ್ಳಿಯಲ್ಲಿಯೇ ನಡೆದಿದ್ದರಿಂದ ರಾಜಕೀಯ ತಿರುವು ಪಡೆದುಕೊಂಡಿದ್ದವು.

ಕಿತ್ತೂರು ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಆಕಾಂಕ್ಷಿಗಳು ಕೋಟೆ ನೆಲ ಮರೆತು ಬಿಟ್ಟು ಎಂ.ಕೆ.ಹುಬ್ಬಳ್ಳಿಯನ್ನೇ ಶಕ್ತಿ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಅಭಿಪ್ರಾಯ, ವಿಶ್ಲೇಷಣೆಗಳೂ ವ್ಯಕ್ತವಾದವು. ಹೀಗಾಗಿ ಇದನ್ನೂ ಗಮನದಲ್ಲಿಟ್ಟುಕೊಂಡು ಕೈ ನಾಯಕ ಬಾಬಾಸಾಹೇಬ್ ಜನರನ್ನು ಮತ್ತಷ್ಟೂ ಭಾವನಾತ್ಮಕವಾಗಿ ಒಗ್ಗೂಡಿಸುವ ಉದ್ದೇಶದೊಂದಿಗೆ ‘ವಿನಯೋತ್ಸವ’ ನೆಪದಲ್ಲಿ ಶಕ್ತಿ ಪ್ರದರ್ಶನಕ್ಕೆ ಕೈ ಕಲಿಗಳ ಕೋಟೆ ಕಟ್ಟುತ್ತಿದ್ದಾರೆ. ಮುಖಂಡ ಬಾಬಾಸಾಹೇಬ್‌ರ ಉಸ್ತುವಾರಿಗೆ ಬಸನಗೌಡ ಕುಲಕರ್ಣಿ, ಅಕ್ಷಯ ಕುಲಕರ್ಣಿ, ಆಷ್ಫಾಕ್ ಹಾವಾಲ್ದಾರ್, ಅಪ್ಪಾಸಾಹೇಬ್ ಶಿಲ್ಲೇದಾರ್, ಮಕ್ತುಮ್ ನದಾಫ್, ಸುನೀಲ್ ಘಿವಾರಿ ಸೇರಿದಂತೆ ಪಾಟೀಲ ಅವರ ಅಸಂಖ್ಯ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ, ಸಲೀಂ ಅಹ್ಮದ್, ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಅವರನ್ನು ಒಳಗೊಂಡಂತೆ ಅನೇಕ ಕೈ ಮುಖಂಡರು, ಕಾರ್ಯಕರ್ತರು ವಿನಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.

‘ಸಿದ್ದರಾಮೋತ್ಸವದಂತೆ ಅದ್ಧೂರಿ ‘ವಿನಯೋತ್ಸವ’ಕ್ಕೆ ಭರ್ಜರಿ ಸಿದ್ಧತೆ ಆರಂಭವಾಗಿದ್ದು ಬರ್ಥ್ಡೆ ಸೆಲಬ್ರೇಷನ್‌ನಲ್ಲಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರ ಜೊತೆಗೆ ಸ್ಯಾಂಡಲ್‌ವುಡ್‌ನ್ ಖ್ಯಾತ ನಟ ದರ್ಶನ್ ಭಾಗವಹಿಸುವ ಸಾಧ್ಯತೆ ಇದೆ. ಹೀಗಾಗಿ ‘ವಿನಯೋತ್ಸವ’ಕ್ಕೆ ಸೆಲಬ್ರಿಟಿ ಕಳೆ ಬರಲಿದೆ. ಕಾರ್ಯಕ್ರಮಕ್ಕೆ ಸರ್ವ ರೀತಿಯ ಸಿದ್ಧತೆಯಲ್ಲಿ ನಿರತರಾಗಿರುವ ಪಾಟೀಲರ ಪಡೆ ವೇದಿಕೆ, ಎಲ್‌ಇಡಿ ಪರದೆ, ಪಾರ್ಕಿಂಗ್, ಊಟದ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಯಲ್ಲಿ ತೊಡಗಿಕೊಂಡಿದೆ.

 

ವರದಿ: ರವಿ ತಳವಾರ 

ಜಿಲ್ಲೆ

ರಾಜ್ಯ

error: Content is protected !!