Saturday, July 20, 2024

ವಿದ್ಯಾರ್ಥಿಗಳ ಹಾಸ್ಟೆಲ್ ಗಳನ್ನು ಅಲಕ್ಷಿಸುತ್ತಿರೋ ಸಮಾಜ ಕಲ್ಯಾಣ ಇಲಾಖೆ! ಬಸವರಾಜ ಕೊರವರ ಆರೋಪ.

ಧಾರವಾಡ : ನಗರದ ಹೊರವಲಯದಲ್ಲಿರುವ ಕೃಷಿ ನಗರದ ಸಮಾಜ ಕಲ್ಯಾಣ ಇಲಾಖೆಯ ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕಳೆದ ಎರಡು ತಿಂಗಳಿಂದ ಮಧ್ಯಾಹ್ನದ ಊಟವಿಲ್ಲದೆ ಪರದಾಟ ನಡೆಸುತ್ತಿದ್ದಾರೆ‌.ಇದಕ್ಕೆ ಸ್ಪಂದಿಸಬೇಕಾದ ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗದವರು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪ ಮಾಡಿದ್ದಾರೆ. 

ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ಬಗ್ಗೆ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರ ಗಮನಕ್ಕೆ ವಿದ್ಯಾರ್ಥಿಗಳಿಂದ ತಿಳಿದು ಬಂದಿದ್ದೆ.ಇದನ್ನು ಪರಿಶೀಲಿಸಲು ಜನಜಾಗೃತಿ ಸಂಘದ ಪದಾಧಿಕಾರಿಗಳ ಜೊತೆ ಹಾಸ್ಟೆಲ್ ಗೆ ಬೇಟಿ ನೀಡದ್ದರು.  

ಈ ವೇಳೆ ಬಸವರಾಜ ಕೊರವರ ಮಾತನಾಡಿ ಧಾರವಾಡದ ಕಿಟೆಲ್, ಆರ್.ಎಲ್ಎಸ್, ಕೆಸಿಡಿ, ಜೆಎಸ್ಎಸ್ ಕಾಲೇಜು ಸೇರಿದಂತೆ ವಿವಿಧ ಪಿಯು ಕಾಲೇಜಿನಲ್ಲಿ ಓದುವ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಈ ವಿದ್ಯಾರ್ಥಿ ನಿಲಯದಲ್ಲಿ 230 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು,ಕಳೆದ ಎರಡು ತಿಂಗಳಿಂದ ಮಧ್ಯಾಹ್ನದ ಊಟವಿಲ್ಲದೆ ಅಕ್ಷರಶಃ ಪರದಾಟ ನಡೆಸುತ್ತಿದ್ದಾರೆ‌.ಅಲ್ಲದೆ ಮೂಲಭೂತ ಸೌಲಭ್ಯಗಳಾದ ಸಮರ್ಪಕ ಕುಡಿಯುವ ನೀರು,ಸ್ನಾನ ಹಾಗೂ ಶೌಚ ಗೃಹ  ಕೂಡ ಸರಿಯಾಗಿ ಒದಗಿಸಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆಯಿದ್ದರೂ ಇದಕ್ಕೆ ಸ್ಪಂದಿಸಬೇಕಾದ ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂದರು.

ಇದೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹಲವಾರು ಬಾರಿ ಕರೆ ಮಾಡಿ ಹಾಸ್ಟೆಲ್ ಅವ್ಯವಸ್ಥೆ ನೋಡಲು ಬರುವಂತೆ ಕರೆದರೂ ಕುಂಟು ನೆಪ ಹೇಳಿ ದೂರ ಉಳಿದರು. ಹಾಸ್ಟೆಲ್ ಗೆ ಆಗಮಿಸದೆ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನವನ್ನು ತೋರಿಸುತ್ತಿರುವ ಅಧಿಕಾರಿಗಳ ವಿರುದ್ದವೂ ಕ್ರಮ ಜರುಗಿಸಬೇಕೆಂದು ಜನಜಾಗೃತಿ ಸಂಘ ಆಗ್ರಹಿಸಿದೆ.

ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರೊಂದಿಗೆ ಮಾತನಾಡಿದ ಅವರು ದಿನನಿತ್ಯ ನೂರಾರು ವಿದ್ಯಾರ್ಥಿಗಳ ಪರದಾಟ, ಹಲವು ಬಸ್ ಹತ್ತಿ ಇಳಿದು ಪಡುವ ಪರಿಪಾಟಲು, ಅಧಿಕಾರಿಗಳ‌ ಬೇಜವಾಬ್ದಾರಿತನದ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಜರುಗಿಸುವುದಾಗಿ ಸಚಿವರು ಭರವಸೆ ನೀಡಿದರು.

ವಿದ್ಯಾರ್ಥಿಗಳ ಅಳಲು: ಕಳೆದ ಎರಡು ತಿಂಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಗೂ ರಾತ್ರಿ ಹೊರಗಡೆಯಿಂದ ಉಪಹಾರ, ಊಟ ತಂದು ಕೊಡುತ್ತಿದ್ದಾರೆ.ಹೊರಗಡೆಯಿಂದ ಸರಬರಾಜು ಮಾಡಲಾಗುತ್ತಿರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಪಹಾರ ಹಾಗೂ ಊಟ ಸಾಕಾಗುತ್ತಿಲ್ಲ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಅರೆಬರೆ ಹೊಟ್ಟೆಯಲ್ಲಿ ದಿನದೂಡಬೇಕಾಗುತ್ತಿದೆ. ಇನ್ನೂ ಮಧ್ಯಾಹ್ನದ ಊಟವಂತೂ ಗಗನಕುಸುಮವಾಗಿದೆ.

ಮಧ್ಯಾಹ್ನದ ಊಟ ಮಾಡಬೇಕಾದರೆ ವಿದ್ಯಾರ್ಥಿಗಳು ದಾಸನಕೊಪ್ಪ ವೃತ್ತದಲ್ಲಿರುವ ಹಾಸ್ಟೆಲ್ ಗೆ ಹೋಗಬೇಕು. ಅಲ್ಲಿಗೆ ಹೋಗಲು ಸಕಾಲಕ್ಕೆ ಬಸ್ ಸಿಗುವುದಿಲ್ಲ. ಸಿಕ್ಕರೂ ಹೊರಗಡೆ ಊಟ ಸಿಗುವಷ್ಟು ಹಣ ಸಂಚಾರಕ್ಕೆ ವೆಚ್ಚ ಮಾಡಬೇಕಾಗುತ್ತದೆ. ಈ ಬಗ್ಗೆ ವಾರ್ಡನ್‌ ಅವರನ್ನು ವಿಚಾರಿಸಿದರೆ ಹಾಸ್ಟೆಲ್ ನಿಂದ ಹೊರಹಾಕುವುದಾಗಿ ಹೆದರಿಸುತ್ತಾರೆ ಎಂದು ವಿದ್ಯಾರ್ಥಿಗಳು ತಮ್ಮ ನೋವನ್ನು ತೋಡಿಕೊಂಡರು.

ಇದರಿಂದಾಗಿ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಊಟವಿಲ್ಲದೆ, ಬಿಸ್ಕೆಟ್ ಹಾಗೂ ಲಘು ಉಪಹಾರ ಸೇವಿಸುವ ಮೂಲಕ ಕಾಲ ಕಳೆಯುತ್ತಿದ್ದಾರೆ.ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವಿಚಾರಿಸಿದರೆ ಅನುದಾನ ಕೊರತೆ ನೆಪ ಹೇಳಿ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.

ಇದನ್ನು ಸೋಮವಾರದ ಒಳಗೆ ಸರಿಪಡಿಸದಿದ್ದರೆ ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ವಿದ್ಯಾರ್ಥಿ ಮುಖಂಡರಾದ ಲಾಲ್ ಸಾಬ, ಚೇತನ, ಮನೋಜ, ತಿಮ್ಮಣ್ಣ, ಮೊಹ್ಮದ ರಫಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!