ಬೆಂಗಳೂರು. ಮಾ, 23 : ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಪುತ್ರಿ ಚೇತನ ಹಾಗೂ ಸಹೋದರ ದ್ವಾರಕೇಶ್ ಮತ್ತು ಕುಟುಂಬದವರು ಬೇಡಜಂಗಮ ಹೆಸರಿನಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವ ಪ್ರಕರಣದಲ್ಲಿ ರೇಣುಕಾಚಾರ್ಯ ಮತ್ತು ಸಹೋದರನನ್ನು ತಕ್ಷಣ ಬಂಧಿಸಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಎಂ ಕೃಷ್ಣಮೂರ್ತಿ ಅವರು, ತಮ್ಮ ಮಗಳು ಚೇತನ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವುದನ್ನು ರೇಣುಕಾಚಾರ್ಯ ಒಪ್ಪಿಕೊಂಡಿದ್ದು, ಒಬ್ಬ ಜವಾಬ್ದಾರಿಯುತ ಶಾಸಕನಾಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದವರ ಸೌಲಭ್ಯಗಳನ್ನು ಪಡೆಯಲು ಸಂಚು ಮಾಡಿರುವುದು ಅಕ್ಷಮ್ಯ ಅಪರಾಧ.
ದುರ್ಬಲವರ್ಗಗಳ ಸೌಲಭ್ಯಗಳನ್ನು ಹೇಗೆ ಶ್ರೀಮಂತರು ಕಬಳಿಸುತ್ತಾರೆ ಎಂಬುದಕ್ಕೆ ಈ ಘಟನೆ ನಿದರ್ಶನ ಎಂದು ಕಿಡಿಕಾರಿದ್ದಾರೆ. ತಮ್ಮ ಸಹೋದರ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದನ್ನು ರೇಣುಕಾಚಾರ್ಯ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ? ಎಂದು ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ.
ಇದಲ್ಲದೆ ಬೆಂಗಳೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು ಆರುನೂರಕ್ಕೂ ಹೆಚ್ಚು ಜನ ಬೇಡಜಂಗಮ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪಡೆದಿರುವುದು ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ತಕ್ಷಣ ಸರ್ಕಾರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಿ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವ ಹಾಗೂ ವಿತರಿಸಿರುವ ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಾಗೆಯೇ ಅವರು ಪಡೆದಿರುವ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದು ಪರಿಶಿಷ್ಟರ ಸೌಲತ್ತು ಕಬಳಿಸಿರುವ ಆಧಾರದ ಮೇಲೆ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು. ಬಿಜೆಪಿ ಪಕ್ಷಕ್ಕೆ ಪರಿಶಿಷ್ಟರ ಮೇಲೆ ನಿಜವಾಗಿಯೂ ಕಳಕಳಿಯಿದ್ದರೆ ತಕ್ಷಣ ರೇಣುಕಾಚಾರ್ಯರನ್ನು ಪಕ್ಷದಿಂದ ಉಚ್ಚಾಟಿಸ ಬೇಕು ಎಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ.
ಈಗಾಗಲೇ ಸಾವಿರಾರು ಜನ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಉದ್ಯೋಗಗಳನ್ನು ಮತ್ತು ಸವಲತ್ತುಗಳನ್ನು ಪಡೆದಿದ್ದಾರೆ. ಈ ಸಂಬಂಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಬಿಜೆಪಿ ಸರ್ಕಾರದ ಸಚಿವ ಪ್ರಭು ಚೌಹಾಣ್ ನಕಲಿ ಜಾತಿ ಪ್ರಮಾಣ ಪಡೆದು ಮೀಸಲು ಕ್ಷೇತ್ರವಾದ ಅವರ ನಿಂದ ಸ್ಪರ್ಧಿಸಿ ಗೆದ್ದು ಸಚಿವರಾಗಿದ್ದಾರೆ ಎಂಬ ಆರೋಪವಿದೆ.
ತಕ್ಷಣ ಈ ಪ್ರಕರಣವನ್ನು ಸಹ ಗಂಭೀರವಾಗಿ ಪರಿಗಣಿಸಿ ಪ್ರಭು ಚೌಹಾಣ್ ಮೇಲೆ ಸೂಕ್ತ ಕ್ರಮ ಕೈಗೊಂಡು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ. ಪಕ್ಷಾತೀತವಾಗಿ ಈ ಪ್ರಕರಣಗಳ ಬಗ್ಗೆ ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಎಲ್ಲಾ ಪಕ್ಷಗಳ ಶಾಸಕರು ಧ್ವನಿ ಎತ್ತಬೇಕೆಂದು ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿಯೂ ಸಹ ಕೆಲವು ಬಿಜೆಪಿ ನಾಯಕರ ಮಕ್ಕಳು ಮತ್ತು ಸಂಬಂಧಿಕರು ಬೇಡಜಂಗಮ ಹೆಸರಿನಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವ ಊಹಾಪೋಹಗಳು ಕೇಳಿಬರುತ್ತಿವೆ.