Tuesday, September 17, 2024

ಕಸಾಪ ವತಿಯಿಂದ ಸಮನ್ವಯ ಕವಿ ಚೆನ್ನವೀರ ಕಣವಿ ನಿಧನಕ್ಕೆ ಶ್ರದ್ಧಾಂಜಲಿ 

ಬೆಳಗಾವಿ ಫೆ.17:  ನೆಹರು ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ವತಿಯಿಂದ ಸಮನ್ವಯ ಕವಿ ಚೆನ್ನವೀರ ಕಣವಿಯವರ ನಿಧನಕ್ಕೆ ಶ್ರದ್ಧಾಂಜಲಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪೂಜೆ ನಮನ ಸಲ್ಲಿಸಿ ಮಾತನಾಡಿದ ಹಿರಿಯ ಸಾಹಿತಿ ಪತ್ರಕರ್ತ ಡಾ.ಸರಜೂ ಕಾಟ್ಕರ್ ವಿನಯಶೀಲ, ನವೋದಯ, ಗ್ರಾಮ್ಯ ಪ್ರಗತಿಶೀಲ ಕವಿಯಾಗಿದ್ದ ಕಣವಿಯವರು ಎಲ್ಲ ಯುಗಗಳ ಕಾವ್ಯದ ವಲಯಗಳನ್ನು ಮೀರಿ ಕೆಲಸ ಮಾಡಿದ್ದಾರೆ. ಅವರ ಐದು ದಶಕಗಳ ಹಿಂದಿನ ಕವಿತೆಗಳು ಸಹ ಈಗಲೂ ಪ್ರಸ್ತುತ ವಾಗಿರುವುದರಿಂದ ಅವರನ್ನು ಸಮನ್ವಯ ಕವಿ ಎಂದು ಕರೆದರು. ಮಾನವೀಯತೆಯ ತುಡಿತ ವಿದ್ದ ವಿನಿತ ಭಾವವಿದ್ದ ಕವಿ ತಮಗೆ ಒದಗಿ ಬರಬಹುದಾದ ರಾಷ್ಟ್ರಕವಿ ಪದವಿಯನ್ನು ತಮ್ಮ ಗೆಳೆಯನಿಗಾಗಿ ತ್ಯಾಗ ಮಾಡಿದ ಮಹಾನ್ ವ್ಯಕ್ತಿತ್ವ ಹೊಂದಿದ್ದರು ಎಂದು ಕಣವಿಯವರ ಜೀವನಗಾಥೆಯನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ ರವರು ಮಾತನಾಡಿ ಚಂದಿರನ ಬಗ್ಗೆ ಅನೇಕ ಕವಿತೆಗಳನ್ನು ಬರೆದಿದ್ದ ಮಾನವೀಯ ಮೌಲ್ಯಗಳ ಸನ್ನಡತೆಯ ಕವಿ ಹುಣ್ಣಿಮೆಯ ದಿನದಂದು ಚಂದಿರನ ಬಳಿಗೆ ಹೋದರು ಎಂದು ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಾಹಿತಿಗಳಾದ ಡಾ. ಎಸ್. ಎಸ್. ಅಂಗಡಿ, ಡಾ.ಎಚ್. ಬಿ.ಕೋಲ್ಕಾರ್, ಡಾ.ಎಚ್.ಐ. ತಿಮ್ಮಾಪುರ, ಡಾ.ನೀಲಗಂಗಾ ಚರಂತಿಮಠ ಕಣವಿಯವರ ನೆನಪುಗಳನ್ನು ಮೆಲುಕು ಹಾಕಿದರು.

ಡಾ ದಯಾನಂದ ಧನವಂತ ಮತ್ತು ಶ್ರೀರಂಗ ಜೋಶಿಯವರು ತಮ್ಮ ಗೀತೆಯ ಮೂಲಕ ನುಡಿನಮನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಕ.ಸಾ.ಪ ಬೆಳಗಾವಿ ತಾಲೂಕಾಧ್ಯಕ್ಷ ಸುರೇಶ ಹಂಜಿ, ಪತ್ರಕರ್ತರಾದ ಮುರುಗೇಶ ಶಿವಪೂಜಿ, ಡಾ.ರಾಮಕೃಷ್ಣ ಮರಾಠೆ, ಆರ್ ಎಸ್ ಚಾಪಗಾವಿ, ಸಿ ಎಂ ಬೂದಿಹಾಳ, ರತ್ನಪ್ರಭಾ ಬೆಲ್ಲದ,ಡಾ.ಹೇಮಾವತಿ ಸೋನೋಳ್ಳಿ,ಜಯಶೀಲಾ, ಬ್ಯಾಕೋಡ ಜಯಶ್ರೀ ನಿರಾಕಾರಿ, ಪ್ರತಿಭಾ ಕಳ್ಳಿಮಠ,ವೀರಭದ್ರ ಅಂಗಡಿ, ಶಿವಾನಂದ ತಲ್ಲೂರ, ಎನ್. ಬಿ.ಕರವಿನಕೊಪ್ಪ, ರಮೇಶ ಮಾಳಗಿ, ಚೇತನ ಏಣಗಿ ಮಠ, ಕಾರ್ತಿಕ ಲೋಕುರ ಸೇರಿದಂತೆ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು ಕಾರ್ಯಕ್ರಮವನ್ನು ಕ.ಸಾ.ಪ ಜಿಲ್ಲಾ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ ನಿರೂಪಿಸಿದರು. 

ಜಿಲ್ಲೆ

ರಾಜ್ಯ

error: Content is protected !!