Saturday, July 20, 2024

ಪ್ರೇಮಿಗಳ ದಿನಕ್ಕಾಗಿ ಕಾತುರದಿಂದ ಕಾಯುವ ಪ್ರೇಮಿಗಳು

ಸುದ್ದಿ ಸದ್ದು ನ್ಯೂಸ್

ಬಸವರಾಜ ಚಿನಗುಡಿ

ಈ ಪ್ರೀತಿ ಒಂಥರಾ…
ತುಟ್ಟಿ ಮೊಬೈಲುಗಳಲ್ಲಿನ ಬಿಟ್ಟಿ (ಫ್ರೀಯಾಗಿ ಕೊಟ್ಟ ಜಿಯೋ) ಕರೆನ್ಸಿಗೆ ಚಿಟ್ಟೆಯಂತೆ ಹಾರಾಡುವ ಯುವ ಜೋಡಿಗಳ ತುಟ್ಟಿ ಮಾತುಗಳು ಗಟ್ಟಿ ಪ್ರೀತಿಯ ಅರ್ಥ ಕಳೆದುಕೊಂಡಿದೆ. ಗಂಟೆಗಟ್ಟಲೇ ಮಾತಾಡುವ ಇಂದಿನ ಯುವ ಜೋಡಿಗಳ ಮಧ್ಯೆ ನಾಳೆ ಏನು ಮಾತಾಡುವುದು ಎಂಬುದರ ಚಿಂತೆ ಉಂಟಾಗಿ ಹಾಂ.. ಹೂಂ… ಗಳೇ ಸಾವಿರ ಸಾವಿರ ಸಲ ಉಚ್ಛರಿಸುತ್ತಿವೆ. ಈ ನಡುವೆ ಇಂದಿನ ಪ್ರೀತಿ ಹಾಗೂ ಎರಡೂವರೆ ದಶಕದ ಹಿಂದಿನ ಪ್ರೀತಿಯ ಬಗ್ಗೆ ನಾನು ಕಂಡುಂಡ ಒಂದಿಷ್ಟು ಅನಿಸಿಕೆಗಳನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.
ಮಾತು ತುಟ್ಟಿಯಾಗಿದ್ದ ದಿನಗಳವು. ಬಹುಶ: ಏರಟೆಲ್, ರಿಲಾಯನ್ಸ್, ಟಾಟಾ ಡೊಕೋಮೊ ಅಷ್ಟೇ ಯಾಕೆ ಇವರಿಗೆಲ್ಲ ಮಾರ್ಕೆಟ್ಟಿನಲ್ಲಿ ಸೆಡ್ಡು ಹೊಡೆದು ನಿಲ್ಲುವಂತೆ ಕುಸ್ತಿ ಕಣದಲ್ಲಿ ಗಟ್ಟಿಯಾಗಿ ನಿಂತಿದ್ದು ಈಗಿನ ಜಿಯೋ ನೆಟ್‍ವರ್ಕ ಮೊಬೈಲುಗಳು. ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಕ್ಷಣ ಮಾತ್ರ ಸಂಪರ್ಕಿಸಬಲ್ಲ ಸಾಧನ ದೊರಕಿಸಿಕೊಟ್ಟ ಈ ಮೊಬೈಲುಗಳು ಮಾತುಗಳನ್ನು ಬಿಕರಿಗಿಟ್ಟಿವೆ. ಏನೆಲ್ಲ ಹೇಳಬೇಕೆಂದು ಹಪಹಪಿಸುವ ಜೀವಿಗಳಿಗೆ ಬಿಟ್ಟಿಯಾಗಿ ಮಾತನಾಡಲು ರುಚಿ ಹಚ್ಚಿದ ಹಲವಾರು ನೆಟ್‍ವರ್ಕ ಕಂಪನಿಗಳು ಮಾತುಗಳಿಗೆ ಎಲ್ಲೆಯೇ ಇರದಂತೆ ಬೆಲಯೂ ಇರದಂತೆ ಮಾಡಿಟ್ಟಿದ್ದಂತೂ ಸುಳ್ಳಲ್ಲ.
ಈ ಮಾತುಗಳ ಬಗ್ಗೆ ಶತಮಾನಗಳಿಂದಲೂ ಹಲವಾರು ಸಂತರು ಶರಣರು ಸಾಧುಗಳು ಮೌಲ್ವಿಗಳು ಪಾದ್ರಿಗಳು ಅವರ ಚಿಂತನೆಗಳು, ಭಾಷಣಗಳು, ಬರವಣಿಗೆಗಳು ಹಾಗೂ ಸಂದೇಶಗಳ ಮೂಲಕ ಸಾರುತ್ತಲೇ ಬಂದಿದ್ದಾರೆ. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವಂತೆ ಹಿಂದಿನ ಕೆಲವು ಸಂತರು ಋಷಿಮುನಿಗಳು ಮನೆ ಮಾರು ತೊರೆದು ಕೇವಲ ಮೌನದಿಂದ ತಪಸ್ಸು ಮಾಡಿದ್ದರ ಫಲವೇ ಅವರ ದೀರ್ಘಾವಧಿಯ ಆಯಸ್ಸಿನ ಗುಟ್ಟು.
ಕಣ್ಣ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ… ಈ ಹಾಡು ಕೇಳುವಾಗಲೆಲ್ಲ ಬಹುಶ: ಈಗಿನ ಕಾಲಮಾನದಲ್ಲಿ ರಚಿತಗೊಂಡಿದ್ದರೂ ಇದನ್ನು ಬರೆದವರು ತಮ್ಮ ವಯೋಮಾನದ ಪ್ರೇಮವನ್ನು ನೆನಪಿಸಿಕೊಂಡು ಬರೆದಿದ್ದರಬಹುದು ಎಂದು ಅನಿಸಿದ್ದಂತೂ ಸುಳ್ಳಲ್ಲ. ಕಣ್ಣಿಂದಲೇ ಮಾತುಗಳು ಶುರುವಾಗೋದು ಈ ಹದಿಹರೆಯದ ವಯಸ್ಸಲ್ಲಿ ಮಾತ್ರ. ನಾನು ಹೇಳ್ತಿರೋದು ಈಗಿನ ಪ್ರೇಮಿಗಳ ಕುರಿತಾಗಿ ಖಂಡಿತ ಅಲ್ಲ. ವಾಟ್ಸ್‍ಪ್, ಫೇಸ್ಬುಕ್ಕು, ಟ್ವಿಟ್ಟರ್ರು, ಮೆಸೇಜುಗಳ ಮೂಲಕವೇ ಪರಿಚಿತಗೊಂಡು ದಿನವಿಡೀ ಮೊಬೈಲ್ ಮೂಲಕ ಹರಟಿ ಕೃತಕ ಇಮೋಜಿಗಳನ್ನು ಹಂಚಿಕೊಳ್ಳುವ ಮೂಲಕ ಅದನ್ನೇ ನಿಜವಾದ ಪ್ರೇಮಲೋಕ ಎಂದು ಭಾವಿಸಿಕೊಂಡು ಮುಖತ: ಭೇಟಿಯಾದಾಗ ಆ ಹಿಂದೆ ಕಂಡುಕೊಂಡ ಅದೆಷ್ಟೋ ಕನಸುಗಳಿಗೆ ತಣ್ಣೀರೆರಚಿದಂತಾಗಿ ಬದುಕಿನ ಕೇವಲ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡು ನಮ್ಮ ನಡುವಿನ ಯುವ ಜನತೆ ಹಲವಾರು ದುರಂತಗಳಿಗೆ ಬಲಿಯಾಗಿರುವ ಅದೇಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದಿವೆ.
ಆದರೆ ಈ ಹಿಂದಿನ ಪ್ರೇಮ ಪ್ರೀತಿ ಈ ತೆರನಾಗಿರಲಿಲ್ಲ. ಆಗೆಲ್ಲ ಹೃದಯಕ್ಕೆ ಇಷ್ಟವಾಗುವುದಕ್ಕೆ ಕಡಿಮೆ ಎಂದರೂ ವರ್ಷಗಳೇ ಬೇಕಿದ್ದವು. ನೇರವಾಗಿ ಮುಖಕ್ಕೆ ಮುಖ ಕೊಟ್ಟು ನೋಡಲೂ ಆಗದ ಆ ಅಧೀರತೆಯಿಂದಾಗಿ ಕೇವಲ ನಡತೆ ಪರೋಕ್ಷ ಮಾತುಗಳ ಮೂಲಕ ಅರಿತುಕೊಂಡು ಕೊನೆಗೆ ಮುಖತ: ಭೇಟಿಯಾದಾಗಲೂ ಢವ-ಢವಗುಟ್ಟುವ ಎದೆಯ ನಡುಕಿನಲ್ಲೇ ಕಣ್ಣೆತ್ತಿ ನೋಡಲೂ ಆಗದ ಆ ಭಯ ಹುಟ್ಟಿಸಿದ್ದು ಆಗಿನ ಸಂಸ್ಕಾರ ಮತ್ತು ಸಂಪ್ರದಾಯ. ಪ್ರೇಮಿಗಳು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಓಡಾಡಲೂ ಆಗದ ಆಗಿನ ಕಟ್ಟುಪಾಡುಗಳಿಂದ ಅದೇಷ್ಟೋ ಪ್ರೇಮಿಗಳು ವಿರಹ ವೇದನೆ ಅನುಭವಿಸುತ್ತಲೇ ಪ್ರೇಮಿಯನ್ನು ನೆನೆನೆನೆದು ಕವಿತೆಯ ಮೂಲಕವೋ ಕಥೆಯ ಮೂಲಕವೋ ತನ್ನಿಷ್ಟದ ಪ್ರೇಮಿಗಳಿಗೆ ತಮ್ಮ ಮನದಾಳದ ಸಂದೇಶಗಳನ್ನು ತಲುಪಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿದ್ದರು.


ಅಂಚೆಯಣ್ಣನ ತಂದು ಕೊಡುವ ಆ ಪ್ರೀತಿ ತುಂಬಿದ ಪ್ರೇಮ ಪತ್ರಕ್ಕಾಗಿ ಕಾಯುವುದೇ ಒಂದು ಆನಂದ. ಆ ಕಾಯುವಿಕೆಯಲ್ಲಿಯೂ ಅದೆಂತದ್ದೋ ಒಂದು ಅವರ್ಣನೀಯ ಆನಂದ ಅಡಗಿತ್ತು. ಪ್ರೇಮ ಪತ್ರ ಕೈಗಿತ್ತ ಅಂಚೆಯಣ್ಣ ಆಗಿನ ಒರೇಮಿಗಳ ಪೊಆಲಿಗೆ ಅಕ್ಷರಶ: ದೇವರೇ ಆಗಿದ್ದ. ಆ ಪ್ರೇಮಪತ್ರವನ್ನು ಮತ್ತೇ ಮತ್ತೇ ಮುಟ್ಟಿ ನೋಡುತ್ತ ಮುದ್ದಿಸುತ್ತ ಏಕಾಂತದಲ್ಲಿಯೇ ಹಾಸಿಗೆ ಮೇಲೆ ಉರುಳಾಡುತ್ತ ಅದನ್ನು ಇಂಚಿಂಚಾಗಿ ಅನುಭವಿಸಿ ಪ್ರಿಯಕರನನ್ನೇ / ಪ್ರಿಯತಮೆಯನ್ನೇ ಅನುಭವಿಸಿ ಓದುವ ಆ ಸುಖ ಆಹಾ! ನಿಜಕ್ಕೂ ಆಹ್ಲಾದಕರ.
ದೂರದ ಊರಿಗೆ ಹೋಗುವಾಗ ಬಸ್ ಸ್ಟ್ಯಾಂಡಿನಲೋ, ನೀರು ಹಿಡಿಯಲು ಬಂದಾಗಲೋ, ಜಾತ್ರೆ, ಹಬ್ಬಗಳಿಗೆ ಹೊಸ ಉಡುಗೆ ತೊಟ್ಟು ಹೋಗುವಾಗಲೋ ಮದುವೆ-ಮುಂಜಿ ಮುಂತಾದ ಸಣ್ಣಪುಟ್ಟ ಕಾರ್ಯಕ್ರಮಗಳಿದ್ದಾಗಲೋ ತಾವು ಇಷ್ಟಪಟ್ ಪ್ರಿಯತಮೆಯನ್ನು ನೋಡಲು ಹಾತೊರೆಯುತ್ತಿದ್ದ ಜೀವಗಳು ಆ ಕ್ಷಣಕ್ಕೆ ತಮ್ಮ ಕಣ್ಣುಗಳನ್ನು ಪ್ರೇಯಸಿಯತ್ತಲೇ ತೂರಿ ತೂರಿ ನೋಡಿ ಮನ ತುಂಬಿಕೊಳ್ಳುತ್ತಿದ್ದರು. ಅದನ್ನೇ ರಾತ್ರಿಯಡೀ ಧ್ಯಾನಿಸುತ್ತ ಕನಸಲ್ಲಿ ಡ್ಯುಯೆಟ್ ಹಾಡುವ ಆ ಪ್ರೇಮದ ಪರಿ ನಿಜಕ್ಕೂ ಗ್ರೇಟ್ ಫೀಲಿಂಗ್ ಕಣ್ರೀ. ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ನಿನ್ನೊಳಿದೆ ನನ್ನ ಮನಸ್ಸು,,, ಅನ್ನೋ ಹಾಡಿನ ಸಾಲುಗಳು ಈ ಪ್ರೇಮಿಗಳನ್ನು ನೋಡಿಯೇ ಬರ್ದಿರಬೇಕು ಅನಿಸುತ್ತೇ.
ಈ ಪ್ರೀತಿ ಒಂಥರಾ ಕಚಗುಳಿ,,, ನಿಜ ಈ ಪ್ರೀತಿ ಹದಿಹರೆಯದ ವಯಸ್ಸನ್ನು ಕಚಗುಳಿಯಿಡುತ್ತಲೇ ಆಡಿಸುವಂತದ್ದು. ಹೃದಯ ಗೀತೆ ಹಾಡುತಿದೆ ಭೂಮಿ ಸ್ವರ್ಗವಾಗಿರೇ,,, ಹೀಗೆ ಪ್ರೇಮಗೀತೆಗಳು ಚಿತ್ರಸಾಹಿತಿಗಳ ಲೇಖನಿಯಲ್ಲಿ ಮೂಡಿ ಬಂದಿದ್ದು ಇದೇ ತರಹದ ಪ್ರೇಮಿಗಳನ್ನು ಕಂಡಾಗ ಅನ್ಸುತ್ತೇ. ಈ ಪ್ರೀತಿ ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಾಗಲೇ ವರ್ಷಗಳು ಕಳೆದು ಹೋಗಿರುತ್ತಿತ್ತು. ಈ ಪರೇಮಿಗಳಿಗೋ ಪರಸ್ಪರ ಪ್ರೇಮ ಪ್ರಸ್ತಾಪ ಮಾಡುವುದಂತೂ ರಣರಂಗದಲ್ಲಿ ಯುದ್ದಕ್ಕಿಳಿದ ಯೋಧರಿಗುಂಟಾದ ಭಯದಷ್ಟೇ ಸತ್ಯ. ಆ ಭಯ ಹೆದರಿಕೆ ನಡುಗು ಎಷ್ಟೋ ಪ್ರೇಮಿಗಳನ್ನು ತಲ್ಲಣಗೊಳಿಸಿದ್ದು ಸುಳ್ಳಲ್ಲ. ಅದರ ನಡುವೆಯೂ ಈ ಪ್ರೇಮವನ್ನು ಪ್ರಸ್ತಾಪ ಮಾಡಲಾಗದೇ ಒದ್ದಾಡುವುದನ್ನು ಕೇಂದ್ರೀಕರಿಸಿಕೊಂಡು ಅದೆಷ್ಟೋ ಕಥೆ, ಕಾದಂಬರಿ ಜೊತೆಗೆ ಸಿನಿಮಾಗಳಾಗಿವೆ.
ಲೋಕವೇ ಹೇಳಿದ ಮಾತಿದು, ವೇದದ ಸಾರವೇ ಕೇಳಿದು, ನಾಳೀನ ಚಿಂತೆಯಲಿ ಬಾಳಬಾರದು, ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು… ಈ ಹಾಡನ್ನು ಪ್ರೇಮಿಗಳಿಗೆ ಧೈರ್ಯ ತುಂಬಲೆಂದೇ ಹಂಸಲೇಖ ಅವರು ಬರೆದಂತಿದೆ. ಪಾರ್ಕು, ಸಿನಿಮಾ ಥಿಯೇಟರು, ರೆಸ್ಟೋರೆಂಟು, ಹೋಟೆಲ್ಲುಗಳಲ್ಲಿ ಗಂಟೆಗಟ್ಟಲೇ ಕೂತು ಹರಟುವ ಇಂದಿನ ಸಾಕಷ್ಟು ಪ್ರೇಮಿಗಳ ನಡುವೆ ಕೇವಲ ಕಣ್ಸನ್ನೆ ಮೂಲಕವೇ ಮಾತಾಡುವ ಪ್ರೇಮಿಗಳದು ವಿಭಿನ್ನ ಪ್ರೀತಿಯೇ ಸರಿ. ಕದ್ದು ಮುಚ್ಚಿ ಮೆಲುದನಿಯಲ್ಲೇ ಉಲಿಯುವ ಆ ಜೋಡಿ ಹಕ್ಕಿಗಳ ಆ ಸಂಭಾಷಣೆ ಇಷ್ಟೇ ಇಷ್ಟು ಚುಟುಕಾಗಿದ್ದರೂ ಆ ಚುಟುಕಿನ ಪ್ರೀತಿಯ ಮಾತುಗಳು ಸಹಸ್ರ ಪುಟಗಳ ಕಾದಂ¨ರಿಯನ್ನೇ ಬರೆಯಬಲ್ಲ ಶಕ್ತಿ ಹೊಂದಿದ್ದವು.
ಒಲವಿನ ಉಡುಗೊರೆ ಕೊಡಲೇನು.. ರಕುತದಿ ಬರೆದೆನು ಇದ ನಾನು… ಕಲಿಯುಗ ಕರ್ಣ ಅಂಬರೀಷ್ ನಟನೆಯ ಈ ಚಿತ್ರದ ಸಾಲುಗಳು ಕೆಲವು ಪ್ರೇಮಿಗಳಿಗೆ ತಮ್ಮ ರಕ್ತದಿಂದ ಪ್ರೇಮ ಪತ್ರ ಬರೆಯುವಂತೆ ಪ್ರೇರೇಪಿಸಿದ್ದೂ ಸುಳ್ಳಲ್ಲ. ಈ ಉಡುಗೊರೆಗಳನ್ನು ಆಯ್ಕೆ ಮಾಡುವಲ್ಲಿಯೂ ವಿಶಿಷ್ಟತೆಯನ್ನು ಮೆರೆದಿದ್ದು ಪ್ರೇಮಿಗಳು ಮಾತ್ರ. ಜಾತ್ರೆಯಲ್ಲಿ ತನ್ನವಳಿಗಾಗಿ ತನ್ನವನಿಗಾಗಿ ಕೊಂಡು ತಂದ ಆ ಪ್ಲಾಸ್ಟಿಕ್ಕು ಬಳೆ, ವಾಚು, ಉಂಗುರ, ಆ ಪುಟ್ಟ ಗೊಂಬೆ ಎದೆಯಲ್ಲಿ ಬಚ್ಚಿಟ್ಟುಕೊಂಡು ಪ್ರೀತಿ ಪಾತ್ರರಿಗೆ ಅವುಗಳನ್ನು ಬೇರೊಬ್ಬರ ಮೂಲಕ ತಲುಪಿಸುವ ಕೆಲಸ ಹೊರದೇಶಕ್ಕೆ ಕದ್ದ ಮಾಲನ್ನು ಸಾಗಿಸಿದಷ್ಟೇ ಕಠಿಣವಾಗಿತ್ತು. ಆದಾಗ್ಯೂ ಆ ಉಡುಗೊರೆ ಪ್ರೀತಿ ಪಾತ್ರರನ್ನು ತಲುಪಿದರೆ ಆಗುವ ಆ ಸಂತೋಷ ಅಷ್ಟಿಷ್ಟಲ್ಲ.
ಮನುಷ್ಯ ಬದುಕಿನ ಬಹುಮುಖ್ಯ ಭಾಗವಾಗಿರುವ ಈ ಪ್ರೀತಿ ಎಷ್ಟೆಲ್ಲ ಬರೆಸಿದೆ, ಇನ್ನೂ ಬರೆಸುತ್ತಲೇ ಇದೆ ನನ್ನ ಈ ಬರವಣಿಗೆಗಳಿಗೆಲ್ಲ ಸ್ಪೂರ್ತಿಯಾಗಿದ್ದು ಇದೇ ನವಿರಾದ ಪ್ರೀತಿ. ಇಂತಹ ಪ್ರೀತಿಯನ್ನು ಇಷ್ಟೇ ಪದದಲ್ಲಿ ಹಿಡಿದಿಡಬೇಕು ಅನ್ನೋದು ನಿಜಕ್ಕೂ ಕಷ್ಟಸಾಧ್ಯವೇ ಸರಿ. ಯಾವ ಕವಿಯೂ ಬರೆಯಲಾರ ಒಲವಿನಿಂದ ಕಣ್ಣೋಟದಿಂದ ಹೃದಯದಲ್ಲಿ ನೀನು ಬರೆದ ಈ ಪ್ರೇಮ ಗೀತೆಯ… ಅನ್ನೋ ಅಣ್ಣಾವ್ರ ಹಾಡಿನಂತೆ ಪ್ರೀತಿಯ ಬಗ್ಗೆ ಬರೆಯುವ ಪ್ರಕ್ರಿಯೆ ನನ್ನಲ್ಲಿ ನಿತ್ಯ ನಿರಂತರವಾಗಿದೆ. ಈ ಬರವಣಿಗೆ ಅನ್ನೋದು ಕೇವಲ ನಿಂತ ನೀರಾಗಬಾರದು ಹಾಗೆಯೇ ಪ್ರೀತಿ ಕೇವಲ ವಯಸ್ಸಿಗೆ ಸೀಮಿತವಾಗಿರದೇ ಕಾಲಾತೀತ ಮತ್ತು ಸೀಮಾತೀತವಾಗಿರಬೇಕು ಮತ್ತು ಇರಲಿದೆ ಅಂತ ಹೇಳಿ ಮತ್ತೊಂದು ಫೆಬ್ರುವರಿ 14 ಕ್ಕೆ ಸಿಗೋಣ ಅಂತ ಹೇಳ್ತಾ ಈ ನನ್ನ ಬರವಣಿಗೆಗೆ ಫುಲ್ ಸ್ಟಾಪ್ ಹೇಳ್ತಿದೀನಿ ಮತ್ತೇ ಸಿಗೋನ ಬೈ ಬೈ…

ಜಿಲ್ಲೆ

ರಾಜ್ಯ

error: Content is protected !!