Tuesday, September 17, 2024

ಪತನದ ಹಾದಿಯತ್ತ ಕ್ಷಣಗಣನೆಯಲ್ಲಿ ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರ.?

ಅದು ಬಹಳ ನಿರೀಕ್ಷೆಗಳ ಕಾಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದಾಗ, ಕಳೆದ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆಗಿದ್ದ ಲೋಪದೋಷಗಳನ್ನು ಸರಿಪಡಿಸಿಕೊಂಡು, ಇದೀಗ ಹೊಸ ಬಗೆಯ ಆಡಳಿತವನ್ನು ನೀಡುತ್ತಾರೆಂಬ ವಿಶ್ವಾಸ ರಾಜ್ಯದ ಜನತೆಯದಾಗಿತ್ತು.ಆದರೆ ಕೊರೋನಾ ಆರ್ಭಟ, ಲಾಕ್ ಡೌನ್ ಗೌಜುಗದ್ದಲದಲ್ಲಿ ಸರಕಾರದ ಅಭಿವೃದ್ಧಿ ಗೋಚರಿಸಲೇ ಇಲ್ಲ. ಬದಲಿಗೆ ಕೊರೋನಾ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಗಾಳಿಮಾತು ಜೋರಾಗಿಯೇ ಸುಳಿದಾಡತೊಡಗಿತ್ತು. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಮೊದಲಿನ ತಮ್ಮ ಅತ್ಯುತ್ಸಾಹದ ಅಧಿಕಾರದ ಮಾದರಿಯನ್ನು ತೋರದೆ, ಒಂದು ಬಗೆಯ ನಿರ್ಲಿಪ್ತ ಭಾವದಿಂದ ಇದ್ದದ್ದು,ಪಕ್ಷದ ಹೈಕಮಾಂಡ್ ಅವರ ಅಧಿಕಾರವನ್ನು ಮೊಟಕುಗೊಳಿಸಿದುದರ ಸಂಕೇತವಾಗಿತ್ತು.

ಕೊರೋನಾ ನಿರ್ವಹಣೆಯಲ್ಲಿಯೂ ಸರ್ಕಾರ ಸಂಪೂರ್ಣವಾಗಿ ಎಡವಿ ಜನರಿಂದ ಶಾಪಕ್ಕೊಳಗಾಯಿತು.ಆರೋಗ್ಯ ಮತ್ತು ವೈದ್ಯಕೀಯ ಸಚಿವರ ನಡುವಿನ ಪೈಪೋಟಿ, ಸರ್ಕಾರದ ಸಚಿವರ ಎಡಬಿಡಂಗಿ ಹೇಳಿಕೆಗಳು,ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಬಹಿರಂಗ, ಯತ್ನಾಳ್ ಅವರ ಮುಖ್ಯಮಂತ್ರಿಗಳ ವಿರುದ್ಧದ ಕಟುವಾದ ಟೀಕೆಗಳು, ವಿಜಯೇಂದ್ರರವರು ಸೂಪರ್ ಮುಖ್ಯಮಂತ್ರಿ ಎಂಬ ಆರೋಪ, ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಪಕ್ಷದ ಶಾಸಕರೇ ಕೊಡುತ್ತಿದ್ದ ದಿನಕ್ಕೊಂದು ಹೇಳಿಕೆಗಳು- ಇವುಗಳೆಲ್ಲ ಸರ್ಕಾರವನ್ನು ಮುಜುಗರಕ್ಕೆ ಈಡುಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವು.ನಂತರ ರಾಜಕೀಯ ಭೀಷ್ಮನ ನಿವೃತ್ತಿಯೂ ಆಗಿ ಹೊಸ ಮುಖ್ಯಮಂತ್ರಿಯ ಆಗಮನವೂ ಆಯಿತು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಬಸವರಾಜ ಬೊಮ್ಮಾಯಿಯವರು ವಿಭಿನ್ನ ರೀತಿಯ ಆಡಳಿತ ನೀಡುವ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಆದರೆ ಅವರ ಸಚಿವ ಸಂಪುಟದ ಮೂವತ್ತು ಪ್ಲಸ್ ಸಚಿವರಲ್ಲಿ ಐದಾರು ಜನರನ್ನು ಹೊರತುಪಡಿಸಿದರೆ ಉಳಿದವರ ಅಸ್ತಿತ್ವವೇ ಇಲ್ಲವೇನೋ ಎಂಬಂತಾಗಿದೆ.ಎಲ್ಲರ ಕಣ್ಣಿಗೆ ರಾಚುವಂತೆ ವಿಭಿನ್ನ ರೀತಿಯ ಆಲೋಚನೆಗಳಿಂದ, ತಮ್ಮ ತಮ್ಮ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಯಿಂದ ಗಮನಸೆಳೆದ ಸಚಿವರು ಯಾರಿದ್ದಾರೆ ಹೇಳಿ? ಇದು ಇನ್ನೊಂದು ಕಾಂಗ್ರೆಸ್, ಜೆಡಿಎಸ್ ಸರ್ಕಾರದ ಭಾಗವೇ ಆಗಿದೆ ಹೊರತು ರಾಷ್ಟ್ರಪ್ರೇಮವನ್ನು ಪ್ರತಿಬಿಂಬಿಸುವ ಪಕ್ಷವೆಂದು ಹೆಸರಾದ ಬಿಜೆಪಿಯ ನಿಜವಾದ ಸರಕಾರವೆಂಬುದು ಗೋಚರಿಸುತ್ತಲೇ ಇಲ್ಲ, ಅಲ್ಲೊಂದು ಇಲ್ಲೊಂದು ಒಳ್ಳೆಯ ಕೆಲಸಗಳನ್ನು ಹೊರತುಪಡಿಸಿ.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ರವರು ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಪ್ರಾಮಾಣಿಕ ಆಡಳಿತ ನಡೆಸಿದ್ದರು. ಆದರೆ ಅವರ ಸಚಿವ ಸಂಪುಟದ ಬಹುಪಾಲು ಸಚಿವರುಗಳು ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರದ ಹಗರಣಗಳಲ್ಲಿ ಸಿಲುಕಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆ ಮೂರಾಬಟ್ಟೆಯಾಗಿತ್ತು. ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ರವರ ಲಕ್ಷಾಂತರ ಕೋಟಿ ರೂಪಾಯಿಗಳ ತರಂಗಾಂತರ ಹರಾಜು ಹಗರಣ ಅದಕ್ಕೊಂದು ಉದಾಹರಣೆ ಅಷ್ಟೆ.ಸರಕಾರದ
ನಾಯಕ ಮಾತ್ರ ಸ್ವಚ್ಛ ಹಸ್ತದಿಂದ ಕೂಡಿದ್ದು, ತನ್ನ ಸಚಿವ ಸಂಪುಟದ ಮೇಲೆ ಹಿಡಿತ ಇಟ್ಟುಕೊಳ್ಳಲಿಲ್ಲವೆಂದರೆ ಏನಾಗಬಹುದು ಎಂಬುದಕ್ಕೆ ಮನಮೋಹನ್ ಸಿಂಗ್ ರವರ ಸರಕಾರ ಸರ್ವಕಾಲಿಕ ನಿದರ್ಶನವಾಗಿದೆ.

ಒಂದು ಸರ್ಕಾರವನ್ನು ಹೇಗೆ ನಡೆಸಬೇಕು ಮತ್ತು ಸರಕಾರವೊಂದು ಹೇಗಿರಬೇಕು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರ ಅತ್ಯುತ್ತಮ ಉದಾಹರಣೆಯಾಗಿದೆ.ಆದರೆ ನಮ್ಮ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ರಾಜ್ಯ ಸರ್ಕಾರವೊಂದು ತನ್ನ ಆಡಳಿತದ ವೈಭವದ ಗುರುತುಗಳನ್ನು ಇಲ್ಲಿ ಬಿಟ್ಟಿರುವ ಯಾವ ಸೂಚನೆಯೂ ಸಿಗುತ್ತಿಲ್ಲ. ಒಂದೇ ಪಕ್ಷಕ್ಕೆ ಸೇರಿದ ಕೇಂದ್ರ ಮತ್ತು ರಾಜ್ಯದ ಆಡಳಿತಗಳಲ್ಲಿ ಅಜಗಜಾಂತರ ವ್ಯತ್ಯಾಸ ಎದ್ದು ಕಾಣುತ್ತಿದೆ. ಲಂಚವಿಲ್ಲದೆ ಯಾವ ಕೆಲಸವೂ ಆಗುತ್ತಿಲ್ಲವೆಂಬುದು ರಾಜ್ಯದ ಜನಸಾಮಾನ್ಯರ ಆರೋಪವಾಗಿದೆ. ಬರಿಕೈಲಿ ಹೋದವರ ಕೆಲಸಗಳನ್ನು ಮಾಡದೆ, ಅಧಿಕಾರಿಗಳು ಸತಾಯಿಸುತ್ತಿರುವ ವಿದ್ಯಮಾನಗಳು ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕಂಡುಬರುತ್ತಿವೆ.

ಆಡಳಿತದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎಂಬುದು ಸರ್ಕಾರವೊಂದರ ಎಲ್ಲ ಪ್ರತಿನಿಧಿಗಳು ಅದರಲ್ಲಿ ಪಾಲುದಾರರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ.ಎಲ್ಲ ಸರ್ಕಾರಗಳ ಹಣೆಬರಹ ಇಷ್ಟೇ ಎಂಬುದು ಗೊತ್ತಿದ್ದರೂ, ಮೌಲ್ಯಗಳ ಬಗ್ಗೆ ಮಾತನಾಡುವ ಬಿಜೆಪಿ ಸರ್ಕಾರದ ಬಗ್ಗೆ ಒಂದಿಷ್ಟು ಆಶಾಭಾವನೆ ಸಮಾಜದಲ್ಲಿತ್ತು.ಆದರೆ ಇತರೆ ಪಕ್ಷಗಳ ಸರ್ಕಾರಗಳಿಗಿಂತ ಈ ಸರ್ಕಾರವು ವಿಭಿನ್ನವಾಗೇನೂ ಉಳಿದಿಲ್ಲ ಎಂಬುದು ಇಷ್ಟೂ ದಿನಗಳ ಆಡಳಿತದ ವೈಖರಿಯಿಂದ ಸುಲಭವಾಗಿ ತಿಳಿಯಬಹುದಾಗಿದೆ. ಬೇರೆ ಸರ್ಕಾರಗಳ ಅವಧಿಯಲ್ಲಿ 10-20% ಇದ್ದ ಲಂಚಗುಳಿತನ ಈ ಸರ್ಕಾರದಲ್ಲಿ 30-40% ಗೆ ಏರಿಕೆಯಾಗಿದೆ ಎಂಬುದು ಸರ್ಕಾರದ ಇಲಾಖೆಗಳ ಒಳಹೊಕ್ಕಾಗ ತಿಳಿದುಬರುವ ವಾಸ್ತವ ಸತ್ಯವಾಗಿದೆ.

ಲಂಚಾವತಾರದ ಕಬಂಧ ಬಾಹುಗಳನ್ನು ಕತ್ತರಿಸುವ ಯೋಗ್ಯತೆ ಇಲ್ಲವೆಂದಾದ ಮೇಲೆ ಅಂತಹ ಸರ್ಕಾರದಿಂದ ನಿರೀಕ್ಷಿಸುವುದಾದರೂ ಏನನ್ನು?ನಿಜಕ್ಕೂ ಈ ಸರ್ಕಾರಕ್ಕೆ ಸಾಚಾತನವಿದ್ದರೆ ತಾನು ಅಧಿಕಾರ ವಹಿಸಿಕೊಂಡ ಕೂಡಲೇ
ಸಿದ್ಧರಾಮಯ್ಯನವರ ಕೈಗೂಸಾದ ಎಸಿಬಿ ಯನ್ನು ಕಿತ್ತೆಸೆದು ಲೋಕಾಯುಕ್ತವನ್ನು ಪುನಃ ಪ್ರತಿಷ್ಠಾಪಿಸಬೇಕಾಗಿತ್ತು(2016 ಮಾರ್ಚ್ ನಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತರ ಅಧೀನದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಲೋಕಾಯುಕ್ತ ಸಂಸ್ಥೆಯಿಂದ ಬೇರ್ಪಡಿಸಿ ಪ್ರತ್ಯೇಕ ಎಸಿಬಿ ರಚನೆಗೆ ಆದೇಶಿಸಿತ್ತು) ಆದರೆ ಅದು ಇವರಿಂದ ಸಾಧ್ಯವಾಗಿಲ್ಲವೆಂಬುದು, ಇವರೂ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂಬುದಕ್ಕೆ ನೇರ ಪುರಾವೆಯನ್ನು ಒದಗಿಸುತ್ತದೆ ಅಲ್ಲವೇ? ಈ ಸರ್ಕಾರ ತನ್ನ ಸಾಚಾತನವನ್ನು ಸಾಬೀತು ಪಡಿಸಲು ಇರುವ ಏಕೈಕ ಮಾನದಂಡ ಲೋಕಾಯುಕ್ತವನ್ನು ಪುನರ್ ಪ್ರತಿಷ್ಠಾಪಿಸುವುದು.ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇವರು ಹಾಗೆಂದು ಭರವಸೆ ನೀಡಿದ್ದರು. ಯಾವಾಗ ಅದು ಸಾಧ್ಯವಾಗುತ್ತದೋ ಆಗ ಮಾತ್ರ ಇವರು ನಂಬಿಕಸ್ಥರು. ಅಲ್ಲಿಯವರೆಗೂ ಅಪನಂಬಿಕೆಯ ತೂಗುಗತ್ತಿ ಇವರ ತಲೆಯ ಮೇಲೆ ನೇತಾಡುತ್ತಿರುವುದಂತೂ ದಿಟ.

ಈ ಅಪನಂಬಿಕೆಯೇ ಈ ಸರ್ಕಾರದ ದೊಡ್ಡ ಕಳಂಕವಾಗಿದೆ.ಇದರಿಂದ ಸರಕಾರದ ಗೌರವವೂ ಸಾಕಷ್ಟು ಧಕ್ಕೆಗೊಳಗಾಗಿದೆ.ಇತ್ತೀಚೆಗೆ ನಡೆದ ಹಾನಗಲ್- ಸಿಂದಗಿ ಕ್ಷೇತ್ರಗಳ ಉಪಚುನಾವಣೆ,ವಿಧಾನ ಪರಿಷತ್ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಯೇ ಇದಕ್ಕೆ ಕೈಗನ್ನಡಿಯಾಗಿದೆ. ಈ ಚುನಾವಣೆಗಳಿಗೂ, ಸಾರ್ವತ್ರಿಕ ಚುನಾವಣೆಗೂ ವ್ಯತ್ಯಾಸವಿದೆಯೆಂದು ಆ ಪಕ್ಷದವರು ಎಷ್ಟೇ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಸಮಾಧಾನಗೊಂಡರೂ, ಜನಸಾಮಾನ್ಯರ ಕಣ್ಣಲ್ಲಿ ಪಕ್ಷದ ಸ್ಥಿತಿಯಂತೂ ಚಿಂತಾಜನಕ ಪರಿಸ್ಥಿತಿಯಲ್ಲಿರುವುದಂತೂ ಸೂರ್ಯನಷ್ಟೆ ಸತ್ಯ. ಹಾಗಾಗಿಯೇ ಎಲ್ಲೆಡೆ ಕೇಳಿಬರುತ್ತಿರುವ ಮಾತು, ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರ ತನ್ನ ಅಂತಿಮ ದಿನಗಳ ಕ್ಷಣಗಣನೆಯನ್ನು ಆರಂಭಿಸಿದೆ ಎಂಬುದು.

ಈ ಸರ್ಕಾರದ ಅಭಿವೃದ್ಧಿಯ ವಿಚಾರಕ್ಕಿಂತ,ಇದು 40% ಕಮಿಷನ್ ಸರ್ಕಾರ ಎಂಬ ವಿಚಾರವೇ ಎಲ್ಲರ ನಾಲಿಗೆಯ ಮೇಲೆ ಹರಿದಾಡುತ್ತಿದೆ.ಇದನ್ನು ಬಲವಾಗಿ ಅಲ್ಲಗಳೆಯುವ ಯಾವ ಸಚಿವರು ಕಾಣುತ್ತಿಲ್ಲ. ಇಷ್ಟೇ ಅಲ್ಲದೆ ರಾಜ್ಯ ಸರ್ಕಾರದ ಮೇಲೆ ವಿರೋಧ ಪಕ್ಷವಾದ ಕಾಂಗ್ರೆಸ್ ನ ಹರುಕು ಬಾಯಿಯ ನಾಯಕರುಗಳು ದಿನನಿತ್ಯ ಹತ್ತಾರು ಆರೋಪ ಮಾಡುತ್ತಿದ್ದರೂ ಸರಕಾರವನ್ನು ಸಮರ್ಥಿಸುವ ಮಂತ್ರಿಗಳು ಬೆರಳೆಣಿಕೆಯಷ್ಟು ಮಾತ್ರ. ಉಳಿದವರ ಬಾಯಿಯನ್ನು ಯಾರು ಒಲಿದಿದ್ದಾರೂ ತಿಳಿಯದಂತಾಗಿದೆ. ವಿರೋಧಪಕ್ಷದ ಆರೋಪಗಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡುವ ಯಾವನೇ ಒಬ್ಬ ಸಚಿವ, ಸಂಪುಟದಲ್ಲಿಲ್ಲದ್ದು ಪಕ್ಷದ ಶೋಚನೀಯ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಕೆಲವೊಮ್ಮೆ ಸ್ವತಃ ಮುಖ್ಯಮಂತ್ರಿಗಳೇ ಅಖಾಡಕ್ಕಿಳಿದು ಪಕ್ಷವನ್ನು ಸಮರ್ಥಿಸಬೇಕಾದ ಮಟ್ಟಕ್ಕೆ ರಾಜ್ಯ ಬಿಜೆಪಿ ಸರ್ಕಾರ ಬಂದು ತಲುಪಿದೆ. ಕೇಂದ್ರದ ನಾಯಕರು ಸಹ ಇಲ್ಲಿನವರ ಕಿವಿ ಹಿಂಡುವ ಕೆಲಸವನ್ನು ಮಾಡಿದಂತೆ ಕಾಣುತ್ತಿಲ್ಲ. ಹಾಗಾಗಿ ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟಂತೆ ಇಲ್ಲಿನವರು ವರ್ತಿಸುತ್ತಿದ್ದಾರೆ.

ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ಮುಜರಾಯಿ ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವ ಕಾನೂನುಗಳ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ಹಾದಿಬೀದಿಗಳಲ್ಲಿ ದೊಡ್ಡ ಗಂಟಲಿನಲ್ಲಿ ಕಿರುಚಾಡುತ್ತಿದ್ದರೂ, ರಾಜ್ಯ ಸರಕಾರದ ಸಚಿವರುಗಳು ಬಾಯಿಬಿಡದೆ ಮೌನಕ್ಕೆ ಶರಣಾಗಿರುವುದಾದರೂ ಏತಕ್ಕೆ? ಎಂಬುದು ಯಕ್ಷಪ್ರಶ್ನೆಯಾಗಿದೆ. ಲಕ್ಷಾಂತರ ಹಿಂದುಗಳ ಬಹುದಿನಗಳ ಬೇಡಿಕೆಯಾಗಿದ್ದ ಈ ಕಾನೂನುಗಳನ್ನು ತಂದ ಕೀರ್ತಿಗೆ ಬಿಜೆಪಿ ಸರಕಾರ ಪಾತ್ರವಾಗಿದ್ದರೂ ಕೂಡ ಅದನ್ನು
ಎನ್ ಕ್ಯಾಶ್ ಮಾಡಿಕೊಳ್ಳುವ ಬಗೆ ತಿಳಿಯದೆ ಎಲ್ಲರೂ ತೆಪ್ಪಗಿರುವುದನ್ನು ನೋಡಿದರೆ ಇವರಿಗೆ ಆಡಳಿತ ನಡೆಸಲು ಬರುವುದಿಲ್ಲವೇ? ಎಂಬ ಅನುಮಾನ ಬರುವುದಂತೂ ಸಹಜವಾಗಿದೆ. ಅಷ್ಟರ ಮಟ್ಟಿಗೆ ಇವರ ಆಲಸ್ಯ ಎದ್ದುಕಾಣುತ್ತಿದೆ. ಅಥವಾ ಬಾಯಿ ಬಿಡಲು ಪುರುಸೊತ್ತಿಲ್ಲದಷ್ಟು ಯಾವ ಮಹಾ ಕಾರ್ಯದಲ್ಲಿ ಇವರೆಲ್ಲ ತಲ್ಲೀನರಾಗಿದ್ದಾರೆ? ಎಂಬ ಅನುಮಾನವೂ ಕಾಡುತ್ತದೆ.

ಇವುಗಳ ಜತೆಗೆ ಇತ್ತೀಚಿನ ಹಿಜಾಬ್ ಅವಾಂತರ ಕೂಡ ಸೇರಿಕೊಂಡಿದೆ. ಆರಂಭದಲ್ಲಿಯೇ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ಇಷ್ಟೆಲ್ಲಾ ಗೋಜಲಾಗದಂತೆ ತಡೆಯಬಹುದಿತ್ತು. ಶಾಲೆಗಳಲ್ಲಿ ಮೇಲು- ಕೀಳೆಂಬ, ಆ ಧರ್ಮ- ಈ ಧರ್ಮವೆಂಬ ತಾರತಮ್ಯ ಇರಬಾರದು ಎಂಬ ಕಾರಣಕ್ಕೆ ಸಮವಸ್ತ್ರ ನಿಯಮವನ್ನು ಜಾರಿಗೆ ತರಲಾಗಿದೆ.ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಸಮವಸ್ತ್ರದ ಹೊರತು ಉಳಿದ ಇನ್ನಾವುದೇ ಬಗೆಯ ವೇಷಭೂಷಣಗಳಿಗೆ ಶಾಲೆ-ಕಾಲೇಜುಗಳಲ್ಲಿ ಅವಕಾಶವಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಲ್ಲಿ ಬಿತ್ತಬೇಕು. ಮಾತಿಗೆ ಮೊದಲು ಶಾಲೆ-ಕಾಲೇಜುಗಳಿಗೆ ರಜೆ ಕೊಡುವುದನ್ನು ನಿಲ್ಲಿಸಿ, ಸಮವಸ್ತ್ರಧಾರಿಯಾಗಿ ಬರುವ ಮಕ್ಕಳಿಗೆ ಶಾಲೆ-ಕಾಲೇಜು ನಡೆಯುವಂತಾಗಬೇಕು. ಪರೀಕ್ಷೆ ವೇಳೆಯಲ್ಲಿ ಶಾಲೆಯ ಮಹತ್ವ ಬಹಳ ಮುಖ್ಯವಾದದ್ದು. ರಜೆ ಕೊಟ್ಟು ಮನೆಯಲ್ಲಿ ಕೂರಿಸುವುದು ಪ್ರಬುದ್ಧ ಸರ್ಕಾರದ ನಡತೆಯಲ್ಲ.

ಈ ವರ್ಷ ರಾಜ್ಯದಲ್ಲಿ ಸುರಿದ ಬಿರುಸಿನ ಮಳೆಗೆ ರಸ್ತೆಗಳೆಲ್ಲ ಕೊಚ್ಚಿ ಹೋಗಿರುವುದನ್ನು ನಾವು ಕಾಣುತ್ತೇವೆ. ಆದರೆ ಅವುಗಳನ್ನು ಸಮರೋಪಾದಿಯಲ್ಲಿ ಪುನರ್ನಿರ್ಮಾಣ ಮಾಡುವ ಕಾರ್ಯ ಎಷ್ಟರ ಮಟ್ಟಿಗೆ ನಡೆದಿದೆಯೆಂದು ಪರೀಕ್ಷಿಸಿದಾಗ, ನೂರಾರು ಗುಂಡಿಗಳಿರುವ ರಸ್ತೆಗಳು ಧೂಳನ್ನು ಸೃಷ್ಟಿಸುತ್ತಾ ಆರೋಗ್ಯಕ್ಕೆ ಸಂಚಕಾರ ತರುವುದಲ್ಲದೆ ಜೀವಕ್ಕೂ ಗಂಡಾಂತರಕಾರಿಯಾಗಿರುವುದನ್ನು ಅನೇಕ ಕಡೆಗಳಲ್ಲಿ ನಾವು ಕಾಣಬಹುದಾಗಿದೆ. ಯಾವ ಜನಪ್ರತಿನಿಧಿಗೂ ಇವುಗಳ ಬಗ್ಗೆ ಕಾಳಜಿಯೇ ಇಲ್ಲವಾಗಿದೆ.

ಇದಕ್ಕೆ ಒಂದು ಉದಾಹರಣೆ ನೀಡುತ್ತೇನೆ. ಸಾಫ್ಟ್ ವೇರ್ ಜಗತ್ತಿನ ದಿಗ್ಗಜರಾದ ಟಿಸಿಎಸ್, ಇನ್ಫೋಸಿಸ್, ವಿಪ್ರೊ ಗಳಂತಹ ಕಂಪೆನಿಗಳಿರುವ ಎಲೆಕ್ಟ್ರಾನಿಕ್ ಸಿಟಿಗೆ ತಾಗಿಕೊಂಡಿರುವ ಸುತ್ತಮುತ್ತಲಿನ ಬಡಾವಣೆಗಳಾದ ಚಿಕ್ಕತೋಗೂರು, ದೊಡ್ಡತೋಗೂರು, ಪ್ರಗತಿನಗರ, ಬಸಾಪುರಗಳಂತಹ ಸ್ಥಳಗಳಲ್ಲಿ ಸುತ್ತಾಡಿ ಬಂದರೆ ಅಲ್ಲಿನ ರಸ್ತೆಗಳ ಪರಿಸ್ಥಿತಿ ಎಲ್ಲರಿಗೂ ಅರಿವಾಗುತ್ತದೆ. ವಾಹನ ಸವಾರರು ಸರ್ಕಸ್ ಮಾಡಿಕೊಂಡು, ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ.ಕೇವಲ ಇವಿಷ್ಟು ಬಡಾವಣೆಗಳು ಮಾತ್ರ ಹೀಗಿರಬಹುದು ಅಂದುಕೊಳ್ಳಬೇಡಿ.ಬೆಂಗಳೂರಿನಾದ್ಯಂತ ಬಹುತೇಕ ರಸ್ತೆಗಳ ಹಾಡು- ಪಾಡು ಇದೇ ಆಗಿದೆ. ರಾಜಧಾನಿಯ ರಸ್ತೆಗಳೇ ಈ ಗತಿಯಾದರೆ ಇನ್ನು ಗ್ರಾಮೀಣ ಪ್ರದೇಶದ ರಸ್ತೆಗಳ ಕಥೆಯನ್ನು ಆ ದೇವರೇ ಕಾಪಾಡಬೇಕು.

ನಾನು ವಾಸಿಸುವ ಪ್ರಗತಿನಗರ ಬಡಾವಣೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಇಲ್ಲಿನ ಶಾಸಕ ಎಂ. ಕೃಷ್ಣಪ್ಪನವರು 3 ಬಾರಿ ಶಾಸಕರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಬಾರಿಸಿದ್ದಾರೆ.ಸುಮಾರು 14 ವರ್ಷಗಳ ಕಾಲ ಈ ಕ್ಷೇತ್ರದ ಶಾಸಕರಾಗಿರುವ ಅವರು ನಮ್ಮ ಬಡಾವಣೆಗೆ ಭೇಟಿ ಕೊಟ್ಟಿದ್ದು ಕೇವಲ ಐದಾರು ಬಾರಿ ಮಾತ್ರ. ಈಗ ನೀವೇ ಯೋಚಿಸಿ.13 ಬಾರಿ ಶಾಸಕರಾದವರು ವರ್ಷಕ್ಕೊಮ್ಮೆಯಂತೆ ಇಲ್ಲಿಗೆ ಭೇಟಿ ನೀಡಿದ್ದರೂ ಅದು 13 ಬಾರಿ ಭೇಟಿ ನೀಡಿದಂತಾಗುತ್ತಿತ್ತು.ಆದರೆ ಕೇವಲ ಐದಾರು ಬಾರಿ ಮಾತ್ರ ಭೇಟಿ ನೀಡುತ್ತಾರೆಂದರೆ,ಇವರು 3 ವರ್ಷದಲ್ಲಿ ಒಮ್ಮೆ ಮಾತ್ರ ಈ ಬಡಾವಣೆಗೆ ಭೇಟಿ ನೀಡಿದಂತಾಯಿತು.

ಒಬ್ಬ ಶಾಸಕ ತನ್ನ ಗೆಲುವಿಗೆ ಕಾರಣರಾದ ಜನತೆಗೆ 3 ವರ್ಷ ಕೊಮ್ಮೆ ಮುಖ ತೋರಿಸುತ್ತಾರೆಂದರೆ,ಸ್ವಾತಂತ್ರದ 75 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿರುವ ನಾವುಗಳು ತಲುಪಿರುವ ಅದಪತನದ ದ್ಯೋತಕವಲ್ಲವೇ? ತನ್ನ ಕ್ಷೇತ್ರದ ವ್ಯಾಪ್ತಿಯ ಬಡಾವಣೆಗಳಿಗೆ ಭೇಟಿ ನೀಡಲಾಗದಷ್ಟು ಶಾಸಕರಿಗಿರುವ ಕೆಲಸವಾದರೂ ಏನು? ಎಷ್ಟೊಂದು ನಿರೀಕ್ಷೆಗಳನ್ನಿಟ್ಟುಕೊಂಡು ಆಯ್ಕೆ ಮಾಡಿದ ಜನರ ಕಷ್ಟಸುಖಗಳನ್ನು ವಿಚಾರಿಸುವವರು ಯಾರು? ಇದು ಬಹಳ ಗಂಭೀರ ವಿಷಯ.ಸರ್ಕಾರಕ್ಕೆ ಕೆಟ್ಟ ಹೆಸರು ತರುವ ವಿಷಯ ಕೂಡ.

ಕಳೆದೆರಡು ದಶಕಗಳಿಂದ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳ ಅವಧಿಯುದ್ದಕ್ಕೂ ಬೆಂಗಳೂರಿನ ಕೆರೆಗಳ ಸ್ವಚ್ಚತೆಯ ಮಾತು ಜೋರಾಗಿ ಕೇಳಿಬರುತ್ತಿದೆ.ಕೆರೆಗಳ ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಾಂತರ ರೂ.ಗಳು ನೀರಿನಂತೆ ಖರ್ಚಾಗಿದೆ. ಆದರೆ ಬೆಂಗಳೂರಿನಲ್ಲೊಮ್ಮೆ ಸುತ್ತಿ ಬಂದಾಗ ಕೆರೆಗಳ ಸ್ಥಿತಿ-ಗತಿಗಳನ್ನು ಕಂಡು ಖೇದವಾಗದಿರದು. ಕೇವಲ ಬೆರಳೆಣಿಯಷ್ಟು ಕೆರೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕೆರೆಗಳ ಸ್ಥಿತಿ ಇಂದಿಗೂ ಚಿಂತಾಜನಕವಾಗಿದೆ. ನನ್ನ ಮಾತಿನಲ್ಲಿ ನಿಮಗೆ ನಂಬಿಕೆಯಿಲ್ಲವೆಂದಾದರೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಗದ್ವಿಖ್ಯಾತ ಸಾಫ್ಟ್ ವೇರ್ ಕಂಪನಿಗಳಾದ ಇನ್ಫೋಸಿಸ್, ಟಿಸಿಎಲ್,ವಿಪ್ರೋ ಗೆ ಕೇವಲ ಕೂಗಳತೆಯ ದೂರದಲ್ಲಿರುವ ದೊಡ್ಡತೋಗೂರು ಕೆರೆಯನ್ನು ನೋಡ ಬನ್ನಿ.ಇದು ಬಹುಶಃ ಜಗತ್ತಿನ ಅತ್ಯಂತ ಕೊಳಕು ಕೆರೆಗಳಲ್ಲಿ ಒಂದೆಂಬ ಕುಖ್ಯಾತಿಗೆ ಪಾತ್ರವಾಗಿದೆ.ಇಂತಹ ಆಯಕಟ್ಟಿನ ಸ್ಥಳದಲ್ಲಿದ್ದರೂ,ದಶಕಗಳಿಂದ ಕೊಳೆತು ನಾರುತ್ತಿದ್ದರೂ, ಈ ಕೆರೆಯ ಮೇಲೆ ಇನ್ನೂ ಜನಪ್ರತಿನಿಧಿಗಳ ಕಣ್ಣು ಬಿದ್ದಿಲ್ಲವೆಂದರೆ ನಿಜಕ್ಕೂ ಅವರ ಕಣ್ಣುಗಳಿಗೆ ಬಲವಾದ ದೃಷ್ಟಿದೋಷ ಉಂಟಾಗಿರಬಹುದು ಅನಿಸುತ್ತದೆ.

ಈ ನಾಡಿನ ಮತ್ತೊಂದು ಅತಿ ಮುಖ್ಯ ಸಮಸ್ಯೆ ಭೂ ಕಬಳಿಕೆ.ಗೋಮಾಳಗಳು, ಗುಂಡುತೋಪುಗಳು, ನೆಡುತೋಪುಗಳು, ಕೆರೆಯಂಗಳಗಳು- ಹೀಗೆ ಸರಕಾರಿ ಜಾಗವೆಲ್ಲ ಸಾವಿರಾರು ಎಕರೆ ಅತಿಕ್ರಮಣವಾಗಿರುವ ವಿವರವಾದ ರಾಮಸ್ವಾಮಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ವರ್ಷಗಟ್ಟಲೆ ಕಳೆದರೂ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಬಾಲಗ್ರಹ ಪೀಡಿತವಾಗಿಯೇ ಉಳಿದಿದೆ. ಸರಕಾರಗಳು ಮಾತ್ರ ಬದಲಾಗುತ್ತಲೇ ಇವೆ. ಆದರೆ ಎಲ್ಲ ಪಕ್ಷದವರ ದೃಷ್ಟಿಕೋನ ಒಂದೇ ಆಗಿದೆ. ಭೂ ಕಬಳಿಕೆ ಮಾಡಿರುವವರು ಎಂತಹ ಬಲಾಡ್ಯ ವ್ಯಕ್ತಿಗಳೇ ಆಗಿರಲಿ, ಸರ್ಕಾರದ ಆಸ್ತಿಯನ್ನು ವಾಪಸ್ ಪಡೆಯುವ ಧೈರ್ಯ ತೋರುವ ತಾಕತ್ತು ಈ ಸರ್ಕಾರಕ್ಕೂ ಇಲ್ಲವಾಗಿದೆ.

ಇನ್ನೂ ಕೋರ್ಟಿನ ಆದೇಶದ ನೆಪ ಹೇಳಿಕೊಂಡು ಹಿಂದೂ ದೇವಾಲಯಗಳನ್ನು ಕೆಡವಲು ಬಿಟ್ಟದ್ದು, ಪ್ರತಿಭಟಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಕೇಸ್ ಗಳನ್ನು ಹಾಕಿರುವುದು,ಅದೇ ರೀತಿ ಸುಪ್ರೀಂ ಕೋರ್ಟ್ ನ ಆದೇಶವಿದ್ದರೂ ಮಸೀದಿಗಳಲ್ಲಿ ಕೂಗುವ ಆಜಾನ್ ಗಳನ್ನು ನಿಲ್ಲಿಸುವ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವುದು- ಇವುಗಳೆಲ್ಲ ಸರ್ಕಾರದ ವಿರುದ್ಧ ಯುವ ಜನಾಂಗ ಮುಖ ತಿರುಗಿಸಲು ಕಾರಣವಾಗಿದೆ.ಇದು ನಮ್ಮ ಸರ್ಕಾರ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂಬ ಮಾತುಗಳು ಅನೇಕ ಯುವಕರ ಗುಂಪುಗಳಲ್ಲಿ ಚರ್ಚಿತವಾಗುತ್ತಿರುವ ವಿಷಯವಾಗಿದೆ.

ಕಳೆದ ಲಾಕ್‌ ಡೌನ್ ಸಮಯದಲ್ಲಿ ದೊಂಬಿ ನಡೆಸಿದ ಪಾದರಾಯನಪುರ ಕೇಸ್,ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ನಡೆದ ದಾಳಿ ಮತ್ತು ದೊಂಬಿ, ರಾಜ್ಯಾದ್ಯಂತ ಆಕ್ಟೋಪಸ್ ನಂತೆ ತನ್ನ ಕಬಂಧಬಾಹುಗಳಿಂದ ಯುವ ಜನರ ಜೀವನವನ್ನು ಹೊಸಕಿ ಹಾಕುತ್ತಿರುವ ಡ್ರಗ್ಸ್ ದಂಧೆ- ಇವುಗಳ ಬಗ್ಗೆ ತನಿಖೆ ನಡೆಯುವ ಪ್ರಕ್ರಿಯೆ ಸಾಗುತ್ತಲೇ ಇದೆ. ತ್ವರಿತವಾಗಿ ತನಿಖೆ ಮುಗಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ನೈತಿಕತೆ ಸರ್ಕಾರದ್ದಾಗಿದೆ. ಇವು ನಿಧಾನವಾದಷ್ಟೂ ಸರ್ಕಾರದ ಕಾರ್ಯವೈಖರಿ ಬಗ್ಗೆ ಅನುಮಾನವಂತೂ ಇದ್ದೇ ಇರುತ್ತದೆ. ಇವೆಲ್ಲಕ್ಕಿಂತ ಹೆಚ್ಚಿನ ಚರ್ಚಾವಿಷಯವಾಗಿರುವುದು ಸಮಾಜದಲ್ಲಿ ಶಾಂತಿ ಕದಡುತ್ತಿರುವ ಎಸ್ ಡಿ ಪಿ ಐ ನ ಚಟುವಟಿಕೆಗಳು.ರಾಜ್ಯದಲ್ಲಿ ನಡೆದಿರುವ ಅನೇಕ ದೊಂಬಿಗಳ ಹಿಂದೆ ಈ ಸಂಘಟನೆಯ ಕೈವಾಡವಿದ್ದರೂ ಇದನ್ನು ನಿಷೇಧಿಸಲು ಸರಕಾರವೇಕೆ ಮೀನಾಮೇಷ ಎಣಿಸುತ್ತಿದೆ ಎಂಬುದು ಅನೇಕ ಯುವ ಸಂಘಟನೆಗಳ ತರ್ಕದ ಪ್ರಶ್ನೆಯಾಗಿದೆ.

ಚುನಾವಣೆ ಇನ್ನೂ ತಿಂಗಳುಗಳ ಲೆಕ್ಕದಲ್ಲಿ ಉಳಿದಿದೆ.ಈಗಲಾದರೂ ಸರಕಾರ ದೃಢ ಹೆಜ್ಜೆ ಇಟ್ಟು ಸಮಾಜದ ಮನಸ್ಥಿತಿಗೆ ಸ್ಪಂದಿಸಿದರೆ ಕಳೆದುಕೊಂಡಿರುವ ಜನಪ್ರಿಯತೆಯನ್ನು ಮತ್ತೆ ಗಳಿಸಲು ಸಾಧ್ಯ.ಇಲ್ಲವಾದರೆ ಈಗಾಗಲೇ ಕುಸಿದಿರುವ ಸರ್ಕಾರದ ಖ್ಯಾತಿ ಇನ್ನಷ್ಟು ಪಾತಾಳ ತಲುಪುವುದು ನಿಶ್ಚಿತವಾಗಿದೆ. ಹಾಗೆಯೇ ದಕ್ಷಿಣದ ಏಕೈಕ ಬಿಜೆಪಿ ಸರ್ಕಾರ ತನ್ನ ಅವಸಾನಕ್ಕೆ ತಾನೇ ಕಾರಣವಾಯಿತು ಎಂದು ಇತಿಹಾಸದಲ್ಲಿ ದಾಖಲಾಗಲಿದೆ. ಮುಖ್ಯಮಂತ್ರಿಗಳನ್ನೊಳಗೊಂಡಂತೆ ಎಲ್ಲ ಮಂತ್ರಿಗಳು, ಶಾಸಕರುಗಳು, ಪಕ್ಷದ ಹಿತೈಷಿಗಳು ಒಟ್ಟಿಗೆ ಕುಳಿತು ಮುಂದೆ ಸಮರೋಪಾದಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚಿಂತಿಸಿ ಕಾರ್ಯೋನ್ಮುಖವಾಗಬೇಕಿದೆ. ಆ ಮೂಲಕ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಬೇಕಿದೆ. ಇದು ಈ ನಾಡಿನ ಬಹುಜನರ ಅಪೇಕ್ಷೆಯೂ ಆಗಿದೆ.

 

ಲೇಖಕರು-ಮಣ್ಣೆ ಮೋಹನ್
M-6360507617
[email protected]

 

ಜಿಲ್ಲೆ

ರಾಜ್ಯ

error: Content is protected !!