Wednesday, September 18, 2024

ಜನಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳದ ಗಧಾಪ್ರಹಾರ: ಬಿ.ಕೆ ಹರಿಪ್ರಸಾದ್‌ ಆಕ್ರೋಶ

ಸುದ್ದಿ ಸದ್ದು ನ್ಯೂಸ್

ಬೆಂಗಳೂರು ಡಿಸೆಂಬರ್‌ 31: ರಾಜ್ಯದಲ್ಲಿ ಕೋವಿಡ್‌ ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ನಿಭಾಯಿಸಲು ಹಾಗೂ ಸರಕಾರ ತನ್ನ ಅದಾಯ ಹೆಚ್ಚಿಸಿಕೊಳ್ಳಲು ಜನಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳದ ಮತ್ತೊಂದು ಗಧಾಪ್ರಹಾರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ಆಕ್ರೋಶವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಕೋವಿಡ್‌ ನಿಂದಾಗಿ ಜನಸಾಮಾನ್ಯರು ಆರ್ಥಿಕವಾಗಿ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ಕಾಳಜಿಯನ್ನು ಹೊಂದಿರುವ ಯಾವುದೇ ಸರಕಾರಗಳು ಇಂತಹ ಪರಿಸ್ಥಿತಿಯಲ್ಲಿ ತೆರಿಗೆಯನ್ನು ಹೆಚ್ಚಿಸುವುದಿಲ್ಲ. ಆದರೆ, ಕಾಮನ್‌ ಮ್ಯಾನ್‌ ಎದೆತಟ್ಟಿಕೊಳ್ಳುವ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ತೆರಿಗೆಯನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊವಿಡ್‌ ಸಂಕಷ್ಟದಿಂದ ತೊಂದರೆಗೀಡಾಗಿರುವ ಜನಸಾಮಾನ್ಯರ ಮೇಲೆ ತೆರಿಗೆಯ ಭಾರವನ್ನು ಹೆಚ್ಚಿಸಿರುವುದು ಸರಿಯಲ್ಲ. 

ಅಲ್ಲದೆ, ಬಿಜೆಪಿ ಸರಕಾರ ತನ್ನ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮ – 2021 ದ ಕರಡು ಪ್ರಕಟಣೆಯಲ್ಲಿ ಗ್ರಾಮೀಣ ಭಾಗದ ಜನರಿಗೂ ಕುಡಿಯುವ ನೀರಿಗೂ ಶುಲ್ಕ ವಿಧಿಸಲು ಮುಂದಾಗಿದೆ. ಹಾಗೆಯೇ, ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಹಲವಾರು ಸೇವೆಗಳಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಇದೇನಾ ಬಿಜೆಪಿ ನಾಗರೀಕರಿಗೆ ನೀಡುತ್ತಿರುವ ಅಚ್ಛೇದಿನ್‌ ಎಂದು ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ. 

ಜನಸಾಮಾನ್ಯರು ಉಪಯೋಗಿಸುವಂತಹ ವಸ್ತುಗಳ ಜಿಎಸ್‌ಟಿಯನ್ನು ಪದೇ ಪದೇ ಹೆಚ್ಚಿಸುವ ಮೂಲಕ ತನ್ನ ಬೊಕ್ಕಸದ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಾತ್ರ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಆದರೆ, ಜನಸಾಮಾನ್ಯರ ಜೋಬಿನ ಬಗ್ಗೆ ಯಾವುದೇ ಕಾಳಜಿಯಿಲ್ಲ ಎನ್ನುವುದನ್ನು ತೋರಿಸುತ್ತದೆ. ರಾಜ್ಯ ಸರಕಾರ ತನ್ನ ಆದಾಯ ನೋಡಿಕೊಳ್ಳುವುದನ್ನ ಬಿಟ್ಟು ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ಬಗ್ಗೆ ಕನಿಷ್ಠ ಕಾಳಜಿಯನ್ನು ತೋರಿಸಿ ಎಂದು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!