Saturday, July 20, 2024

ಕ್ಷೀರಭಾಗ್ಯ ಹಾಲು ಅಕ್ರಮ ಸರಬರಾಜು : ಮಾಹಿತಿ ಮೇರೆಗೆ ಪೋಲಿಸರು ದಾಳಿ.

ರಾಯಬಾಗ (ಅ.14):ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಸರಕಾರಿ ಶಾಲೆ ಮಕ್ಕಳಿಗೆ ನೀಡುವ ಕ್ಷೀರ ಭಾಗ್ಯ ಹಾಲಿನ ಬ್ಯಾಗ್‌ಗಳು ಅನಧಿಕೃತವಾಗಿ ಸಂಗ್ರಹಿಸಿಟಿದ್ದ ಖಾಸಗಿ ವ್ಯಕ್ತಿಯ ಮನೆಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಬಾವನಸೌಂದತ್ತಿ ಗ್ರಾಮದ ಆರೋಪಿಗಳಾದ ರಾಜಗೌಡ ಈರಗೌಡ ಪಾಟೀಲ (45) ಹಾಗೂ ಮಧ್ಯವರ್ತಿಯಾಗಿ ಹಾಲಿನ ಬ್ಯಾಗ್ ಕೊಡಸಿರುವ ಸುನೀಲ ಅಶೋಕ ಗೊರವ (35) ಇವರನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಧ್ಯಾಹ್ನ ಬಿಸಿಯೂಟ ಅಧಿಕಾರಿ ಕುಮಾರ ಮಾದರ ಅವರ ಮಾಹಿತಿ ಮೇರೆಗೆ ಅಥಣಿ ಡಿವಾಯ್‌ಎಸ್‌ಪಿ ಎಸ್.ಬಿ.ಗಿರೀಶ ಅವರ ನೇತೃತ್ವದಲ್ಲಿ ನ್ಯಾಯಾಲಯದ ಶೋಧನಾ ವಾರಂಟ್ ಪಡೆದು ದಾಳಿ ನಡೆಸಿದ ಪೊಲೀಸರು. ಆರೋಪಿ ರಾಜಗೌಡ ಪಾಟೀಲ ಮನೆಯಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಕ್ಷೀರ ಭಾಗ್ಯ ಹಾಲಿನ 25 ಕೆಜಿ.ತೂಕದ 11 ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ವಿಚಾರಿಸಿದಾಗ ಆತನು ಹಾಲಿನ ಬ್ಯಾಗ್‌ಗಳನ್ನು ನಿಪ್ಪಾಣಿ ತಾಲೂಕಿನ ಕಾರದಗಾದಿಂದ ತಂದಿರುವುದಾಗಿ  ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಆರೋಪಿ ರಾಜಗೌಡ ಪಾಟೀಲ ಇತನಿಗೆ ಮಧ್ಯವರ್ತಿಯಾಗಿ ಹಾಲಿನ ಬ್ಯಾಗ್ ನೀಡಿರುವ ಸುನೀಲ ಗೊರವ ಅವನ ಮನೆಯಲ್ಲಿ ಕೂಡ  ೨೫ ಕೆಜಿ ತೂಕದ ಸುಮಾರು 35 ಬ್ಯಾಗ್‌ಗಳು ದೊರಕಿದ್ದು ಇದರ ಬಗ್ಗೆ ಕೂಡ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಯಬಾಗ ತಾಲೂಕಿನಲ್ಲಿ ಕ್ಷೀರಭಾಗ್ಯ ಹಾಲು ಸರಬರಾಜು ಅಕ್ರಮ ಸರಬರಾಜು ವ್ಯಾಪಕವಾಗಿ ಹರಡಿದ್ದು, ಇದರ ಕುರಿತು ತನಿಖೆ ಕೈಗೊಂಡಿದ್ದು, ಇದರಲ್ಲಿ ಭಾಗಿಯಾಗಿರುವ ಇನ್ನಷ್ಟು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಧಿಕೃತ ಗುತ್ತಿಗೆದಾರ ಶೇಖರ ಹಾರೂಗೇರಿ ಇತನು ಕಂಚಕರವಾಡಿ ಗ್ರಾಮದ ಕುಮಾರ ಪಾಟೀಲ ಇತನಿಗೆ ಸಬ್‌ಡೀಲರ್ ಶಿಪ್  ನೀಡಿದ್ದು, ಇವರ ಕಡೆಯಿಂದ ಸುಮಾರು ಕ್ಷೀರ ಭಾಗ್ಯ ಹಾಲಿನ 85 ಬ್ಯಾಗ್‌ಗಳನ್ನು ವಶಪಡಿಸಿಕೊಂಡು ಇದರ ಬಗ್ಗೆ ಕೂಡ ಸಂಪೂರ್ಣವಾಗಿ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ದಾಳಿಯಲ್ಲಿ ಸಿಪಿಐ ಎಚ್.ಡಿ.ಮುಲ್ಲಾ, ಪಿಎಸ್‌ಐ ಎಸ್.ಕೆ.ಕಾಗೆ, ಒ.ಎಸ್.ಒಡೆಯರ, ಆರ್.ಬಿ.ಖಾನಾಪೂರೆ, ಎಸ್.ವಾಯ್.ತಳವಾರ, ಬಿ.ಸಿ.ಕಾಂಬಳೆ, ಎಮ್.ಕೆ.ನಾಯಿಕ, ಬಿ.ಬಿ.ಶೆಟ್ಟೆಪ್ಪನ್ನವರ, ಎಸ್.ಎಸ್.ಚೌಧರಿ  ಪಾಲ್ಗೊಂಡಿದ್ದರು.

ಜಿಲ್ಲೆ

ರಾಜ್ಯ

error: Content is protected !!